ತೋಚಿದ್ದು......ಗೀಚಿದ್ದು

Tuesday, October 30, 2007

ವಿಕಿಪೀಡಿಯ ಮತ್ತು ಕರ್ನಾಟಕ

ಸುಮಾರು ಒಂದು ವರ್ಷದ ಮೇಲೆ ನನ್ನ ಬ್ಲಾಗ್‌ ಅಪ್‌ಡೇಟ್‌ ಮಾಡುತ್ತಾ ಇದ್ದೀನಿ. ನೀನು ಬ್ಲಾಗ್‌ ಅಪ್‌ಡೇಟ್‌ ಮಾಡದೆ ಇದ್ದರೆ ನಿನ್ನ ಜೊತೆ ಮಾತನ್ನೇ ಬಿಟ್ಟಿಬಿಡುತ್ತೇನೆ ಅನ್ನೋ ಕೆಲವು ಸ್ನೇಹಿತರ ಧಮಕಿಯ ಮಧ್ಯೆಯೂ ಬ್ಲಾಗ್ ಅಪ್‌ಡೇಟ್ ಮಾಡದೆ ಇರುವ ಧೈರ್ಯ ಉಳಿಸಿಕೊಂಡು ಬಂದಿದ್ದೇನೆ. ಏನಾದರೂ ಅಪ್‌ಡೇಟ್ ಮಾಡಲೇಬೇಕು ಅಂತ ತುಂಬಾ ದಿನದಿಂದ ಯೋಚಿಸುತ್ತಿದ್ದವನಿಗೆ ಈಗ ಸರಿಯಾದ ಕಾಲ, ಕಾರಣ ಹುಡುಕಿಕೊಂಡು ಬಂದಿದೆ.

ವಿಕಿಪೀಡಿಯ ಯಾರಿಗೆ ಗೊತ್ತಿಲ್ಲ? ಗೂಗಲ್‌ನಲ್ಲಿ ಯಾವುದಾದರೂ ವಿಷಯದ ಬಗ್ಗೆ ಸರ್ಚ್ ಮಾಡುವಾಗ ಮೊದಲು ಸಿಗುವ ಕೊಂಡಿ ವಿಕಿಪೀಡಿಯದ್ದೇ. ಈಗಾಗಲೇ ವಿಕಿಪೀಡಿಯದ ಇಂಗ್ಲಿಷ್ edition, most visited siteಗಳಲ್ಲಿ ಒಂದೆಂದು ಸ್ಥಾನ ಗಳಿಸಿದೆ. ಇಂತಿಪ್ಪ ವಿಕಿಪೀಡಿಯ ನಾಳೆ ಅಂದರೆ ನವೆಂಬರ್ ೧ರಂದು ಕನ್ನಡಿಗರಿಗೆಲ್ಲಾ ಒಂದು ಪರಮ ಸಂತೋಷದ ಸುದ್ದಿಯನ್ನು ನೀಡಲು ಮುಂದಾಗಿದೆ. "Karnataka" ಲೇಖನವನ್ನ ಅತ್ಯುತ್ತಮ ಲೇಖನಗಳಲ್ಲಿ ಒಂದು ಎಂದು ಪರಿಗಣಿಸಿರುವ ವಿಕಿಪೀಡಿಯ, ಕನ್ನಡ ರಾಜ್ಯೋತ್ಸವದ ಶುಭಸಂದರ್ಭದಲ್ಲಿ ಆ ಲೇಖನವನ್ನು ಮುಖಪುಟದಲ್ಲಿ ಪ್ರಕಟಿಸಲು ಮುಂದಾಗಿದೆ!

ನೀವು ಕರ್ನಾಟಕೆ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಲೇಖನವನ್ನು ವಿಕಿಪೀಡಿಯದಲ್ಲಿ ನೋಡಿ. ಎಲ್ಲಾ ಲೇಖನಗಳು Featured article ಅಥವ ಅತ್ಯುತ್ತಮ ಪಟ್ಟಿಗೆ ಸೇರಿವೆ. ಅತ್ಯಂತ ಸುಂದರ ಚಿತ್ರಗಳು, ಸ್ಪಷ್ಟ ವಿವರಣೆ ಹಾಗೂ ವಸ್ತುನಿಷ್ಟ ಬರಹಗಳಿಂದ ಬಹಳ ಜನರ ಮೆಚ್ಚುಗೆಗೆ ಲೇಖನಗಳು ಪಾತ್ರವಾಗಿವೆ. ಈ ಲೇಖನಗಳನ್ನ ಬರೆಯುವಲ್ಲಿ ಅಮೆರಿಕೆಯಲ್ಲಿ ನೆಲೆಸಿರುವ ದಿನೇಶ್ ಕನ್ನಂಬಾಡಿ ಎನ್ನುವವರ ಕೊಡುಗೆ ಅಪಾರ. ಇತಿಹಾಸಕ್ಕೆ ಸಂಭಂದಿಸಿದಂತೆ ಅವರ ಜ್ನಾನ ಅದ್ಭುತವಾದದ್ದು. ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳು ವಿಕಿಪೀಡಿಯದಲ್ಲಿ ಸೊರಗುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ಪತಾಕೆಯನ್ನು ಎತ್ತರಕ್ಕೆ ಹಾರಿಸಿವರು ಅವರು. ಅವರ ಜೊತೆ ಇನ್ನೂ ಕೆಲವು ಉತ್ಸಾಹಿಗಳು ಸೇರಿಕೊಂಡು ಕನ್ನಡ/ಕರ್ನಾಟಕಕ್ಕೆ ಸಂಬಂಧಿಸಿದ ಲೇಖನಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇವಲ ತಾಯ್ನಾಡಿನ ಗೌರವ ಉಳಿಸುವುದಕ್ಕೋಸ್ಕರ ವಿಕಿಪೀಡಿಯದಲ್ಲಿ ದುಡಿಯುತ್ತಿರುವ ಉತ್ಸಾಹಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಕನ್ನಡ ರಾಜ್ಯೋತ್ಸವದ ದಿನ ವಿಕಿಪೀಡಿಯದ ಮುಖಪುಟ ನೋಡಲು ಮರೆಯಬೇಡಿ. "Karnataka" ಲೇಖನ ಹಲವಾರು ಜನರ ಶ್ರದ್ದೆ, ಉತ್ಸಾಹ,ದುಡಿಮೆಯಿಂದ ರೂಪುಗೊಂಡದ್ದು. ಸುಮಾರು ಮೂರು ತಿಂಗಳ ಹಿಂದೆ ಅತ್ಯುತ್ತಮ ಲೇಖನ ಎಂಬ ಗೌರವ ಗಳಿಸಿತು. ಈಗ ಮುಖಪುಟದಲ್ಲಿ ಪ್ರಕಟವಾಗುತ್ತಿದೆ. ಸಂಭ್ರಮಿಸಲು ಇದಕ್ಕಿಂತ ಇನ್ನೇನು ಬೇಕು?

ಕನ್ನಡ ರಾಜ್ಯೋತ್ಸವದ ಶುಭಾಷಯಗಳು.

ಕರ್ನಾಟಕ ಲೇಖನದ ಲಿಂಕ್ - http://en.wikipedia.org/wiki/Karnataka

ವಿಕಿಪೀಡಿಯ ಮುಕಪುಟ - http://en.wikipedia.org/wiki/Main_Page

Saturday, September 09, 2006

ನಿಜವಾದ ಲೇಖಕರ(ಯಾರು ಬರೆದದ್ದು ಎಂದು ನನಗೆ ಗೊತ್ತಿಲ್ಲ) ಕ್ಷಮೆ ಕೋರಿ ನನಗೆ ಬಹಳ ಇಷ್ಟವಾದ್ದರಿಂದ ಈ ಕಿರುಗವಿತೆಯನ್ನ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ, ನೆಲ
ಹೊನ್ನು ಬೇಕು
ಕೆಲವರಿಗೆ ಪ್ರೀತಿ;
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.

-ಕದ್ದದ್ದು

Sunday, July 30, 2006

ಚಂದಿರನ ರಾತ್ರಿಗಳು

ಚಂದಿರನ ಅಂಗಳದಲ್ಲಿ
ಜೊತೆಯಾಗಿ ಕಳೆದ ರಾತ್ರಿಗಳು
ನೆನಪಾಗುತ್ತವೆ,
ಆದರೆ ದುಖಃವಾಗುವುದಿಲ್ಲ;
ಏಕೆಂದರೆ ನನಗೆ ಗೊತ್ತು
ಬೆಳದಿಂಗಳು ದಹದಹಿಸುವಾಗ ನಿನ್ನ
ಪ್ರೀತಿ ಕರಗಿಹೋಗುತ್ತದೆ.

Saturday, July 29, 2006

ಚಿಕೂನ್‌ಗುನ್ಯಾ ಮತ್ತು ಕೋಳಿ ಮಾಂಸ

ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na" ಎಂದು ಹೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು ಮತ್ತು ಎರಡನೆಯದು ನಾನು ಸಸ್ಯಾಹಾರಿಯಾದ್ದರಿಂದ ಜಗತ್ತಿನ ನಾನಾ ಬಗೆಯ ಮಾಂಸಾಹಾರದ ರುಚಿಯನ್ನು ಸವಿಯುವ ಅವಕಾಶವನ್ನ ಕಳೆದುಕೊಂಡಿದ್ದು. ಇದರಲ್ಲಿ ಮೊದಲನೆಯ ವಿಷಯವನ್ನ ಸರಿಪಡಿಸುವುದು "ಸಂಗೀತಾಭ್ಯಾಸ" ಮುಂತಾದ ಕಷ್ಟಪಡಬೇಕಾದ ಮಾರ್ಗವನ್ನ ಒಳಗೊಂಡಿದೆ! "ಕಷ್ಟಪಡಬೇಕಾದ ಯಾವುದನ್ನೂ ಪ್ರಯತ್ನಿಸುವುದಿಲ್ಲ" ಅಂತ ನಾನು ಮತ್ತೆ ನನ್ನ ಸ್ನೇಹಿತ ಒಟ್ಟಿಗೆ ಪ್ರತಿಙ್ಞೆ ಮಾಡಿರುವುದರಿಂದ, ಮಾತಿಗೆ ತಪ್ಪಿ ಆತನಿಗೆ ನೋವುಂಟು ಮಾಡುವ ದುರುದ್ದೇಶ ನನಗಿಲ್ಲ. ಹಾಗಾಗಿ ಬಾತ್‌ರೂಮ್‌ನಲ್ಲಿ, ಸ್ನೇಹಿತರ ಮುಂದೆ(ಅವರು ಎಷ್ಟು ಬೈದರೂ), ಮನೆಯಲ್ಲಿ ನನ್ನ ಮನಸೋ ಇಚ್ಚೆ ಹಾಡಿ ನನ್ನ ಮನಸ್ಸಿನ ನೋವನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಿಕೊಳ್ಳುತ್ತೇನೆ.
ನಾನು ತುಂಬಾ ಚಿಕ್ಕವನಿದ್ದಾಗ "ಪಾಪ ಕೋಳಿ,ಒಳ್ಳೇದು, ಸಾಯಿಸಬಾರದು ಅದನ್ನ" ಎಂದು ಚಿಕನ್‌ ತಿನ್ನುತ್ತಿರಲಿಲ್ಲ. ಸ್ವಲ್ಪ ದೊಡ್ಡವನಾದ ಮೇಲೆ "ಮನುಷ್ಯ ಕೋಳಿಗಳನ್ನು ತಿನ್ನುತ್ತಾ ಹೋದರೆ ಅವುಗಳ ಸಂತತಿಯೇ ಭೂಮಿಯ ಮೇಲೆ ಉಳಿಯುವುದಿಲ್ಲ" ಎಂದು ಚಿಕನ್‌ ತಿನ್ನುತಿರಲಿಲ್ಲ. ಸ್ವಲ್ಪ ದಿನ "Be Vegan, Buy Vegan" ಸಂಸ್ಥೆಯ ಸದಸ್ಯನಾಗಿದ್ದರಿಂದ ಕೋಳಿಗಳಿಗೆ ನನ್ನ ಹೊಟ್ಟೆಯಲ್ಲಿ ಸ್ವರ್ಗ ಕಾಣುವ ಅವಕಾಶ ತಪ್ಪಿ ಹೋಯಿತು.ತಿನ್ನಲು ಟ್ರೈ ಮಾಡಿದ ಒಂದೆರಡು ಸಲ "ರಬ್ಬರ್‌ನಂತೆ ಅಗಿಯುವುದು ನನ್ನ ಕೈಯಲ್ಲಿ ಆಗುವುದಿಲ್ಲ" ಎಂದು ತೀರ್ಮಾನವಾದ್ದರಿಂದ ಶಿವಾಜಿನಗರದ ಹೋಟೆಲ್‌ಗಳಲ್ಲಿ ತೂಗುಹಾಕುವ ಚಿಕನ್‌ ತಂದೂರಿ(?)ಯನ್ನು ತಿನ್ನುವ ಕನಸು ಕನಸಾಗಿಯೇ ಉಳಿದುಬಿಟ್ಟಿತು. ಆದರೆ ಚಿಕೂನ್‌ಗುನ್ಯದ ಜೊತೆ ನನ್ನ ಮುಖಾಮುಖಿಯಾಗಬೇಕಾಗಿ ಬಂದದ್ದು ಮಾತ್ರ ನಾನು ಡೆಟ್ರಾಯಿಟ್‌ಗೆ ಬಂದ ಮೇಲೆ.
ಇಲ್ಲಿ ನನ್ನ ರೂಮ್‌ಮೇಟ್‌ ಆಗಾಗ ಹೇಳುತ್ತಿರುತ್ತಾನೆ. ನಾಲ್ಕು ಕಾಲಿನದರಲ್ಲಿ ಕುರ್ಚಿ ಟೇಬಲನ್ನು ಹೊರತುಪಡಿಸಿ ಉಳಿದಲ್ಲವನ್ನೂ ಆತ ತಿನ್ನುತ್ತಾನಂತೆ! ಇದನ್ನು ಆತ ತಮಾಷೆಗೆ ಹೇಳಿದರೂ ಆತನ ಮಾಂಸದ ಮೇಲಿನ ಪ್ರೀತಿಯನ್ನು ನೋಡಿರುವ ನಾನು ಈ ಮಾತು ಪರಮಸತ್ಯ ಎಂದೇ ನಂಬುತ್ತೇನೆ. ಆತ ನನ್ನ ಮತ್ತೊಬ್ಬ ರೂಮ್‌ಮೇಟ್‌ನ ಬಗ್ಗೆ ಹೇಳಿದ ಮಾತು ಇಂದಿಗೂ ನನ್ನನ್ನ ಜಾಗರೂಕನಾಗಿ ಇರುವಂತೆ ಮಾಡಿದೆ. ರಾತ್ರಿ ಮಲಗಿದ್ದಾಗ ಸ್ವಲ್ಪ ಎಚ್ಚರ ತಪ್ಪಿದರೂ ನನ್ನನ್ನೇ ಕಡಿದುಕೊಂಡು ತಿಂದುಬಿಡುತ್ತಾನಂತೆ! ನಾನು ಸಿಹಿಯನ್ನು ಜಾಸ್ತಿ ತಿನ್ನುವುದರಿಂದ ನನ್ನ ಮಾಂಸ ಕೂಡ ಸಿಹಿಯಾಗೇ ಇರುತ್ತದಂತೆ! ಇಂತಿಪ್ಪ ನನ್ನ ರೂಮ್‌ಮೇಟ್‌ಗಳಿಗೆ ಬರೇ ಪುಳಿಚಾರು ತಿಂದುಕೊಂಡು ಬದುಕುವ ನನ್ನ "ದಯನೀಯ" ಸ್ಥಿತಿಯ ಬಗ್ಗೆ ಕಾಲಕ್ರಮೇಣ ಕರುಣೆ ಉಕ್ಕಿ ಬಂತು. ಹಾಗಾಗಿ ಚಿಕನ್‌ನ ರುಚಿಯ ಪರಿಚಯ ಮಾಡಿಸಿ ನನ್ನ ಜೀವನದಲ್ಲಿ revolution ಉಂಟು ಮಾಡಬೇಕೆಂಬ ಅಭಿಲಾಷೆಯನ್ನ ಒಮ್ಮೆ ನನ್ನ ರೂಮಿ ಚಹ ಕುಡಿಯುವಾಗ ವ್ಯಕ್ತಪಡಿಸಿದ. ನಮ್ಮ ಮನೆಯ ಪಕ್ಕದಲ್ಲೇ ಇದ್ದ "Cass Cafe"ಯಲ್ಲಿ ಅಮೆರಿಕದ ನ್ಯಾಷನಲ್‌ ಫುಡ್ ಆದ ಬಫೆಲೋ ವಿಂಗ್ಸ್‌ ತಿನ್ನುವ ಮೂಲಕ ನನ್ನ ಚಿಕನ್‌ career ಶುರು ಮಾಡಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಮಾಂಸಾಹಾರದ ವಿಚಾರದಲ್ಲಿ ಭಾರತೀಯರಷ್ಟು confused ಗಿರಾಕಿಗಳು ಬಹುಶಃ ಜಗತ್ತಿನ ಮತ್ಯಾವ ದೇಶದವರೂ ಇಲ್ಲ. ಬೇರೆ ದೇಶದಲ್ಲಿ ಮಾಂಸ ತಿನ್ನುವ ವಿಚಾರದಲ್ಲಿ ಕೇವಲ ಎರಡೇ possibility ಇರಲು ಸಾಧ್ಯ. ಒಂದೇ ತಿನ್ನುತ್ತಾರೆ, ಅಥವಾ ತಿನ್ನುವುದಿಲ್ಲ. ಅದೇ ಭಾರತೀಯರನ್ನು ನೋಡಿ. ಯಾರನ್ನೇ ನೀವು ಸರಿಯಾಗಿ ತಿಳಿಯದೆ ವೆಜ್ಜೋ ಅಥವಾ ನಾನ್‌ವೆಜ್ಜೋ ಎಂದು decide ಮಾಡುವ ಹಾಗಿಲ್ಲ. ಎಷ್ಟೋ ಸಾರಿ "ನಾನ್‌ ವೆಜ್ಜು" ಅಂದಿದ್ದನ್ನ ಕೇಳಿಸಿಕೊಳ್ಳುವವರು ಸರಿಯಾಗಿ ಅರ್ಥ ಮಾಡಿಕೊಳ್ಳದೆ "ನಾನ್‌ವೆಜ್ಜು" ಎಂದು ತಿಳಿದು ಅಪಾರ್ಥಗಳಾಗಿದ್ದೂ ಇದೆ! ನಾನ್‌ವೆಜ್ಜು ಎಂದು ತಿಳಿದ ಮೇಲೂ ಯಾವ್ಯಾವ ಪ್ರಾಣಿಗಳು ಅವರ Nonveg ಲಿಸ್ಟ್‌ನಲ್ಲಿ ಸೇರಲು ಅನರ್ಹ ಎಂಬುದನ್ನು ಕೇಳಿ ಖಚಿತ ಮಾಡಿಕೊಳ್ಳಬೇಕು. ಸಾಲದ್ದಕ್ಕೆ ಒಂದೊಂದು ಜಾತಿ, ಒಳಜಾತಿ, ಪಂಗಡಗಳದ್ದು ಒಂದೊಂದು ನಿಯಮ. ಆಹಾರಾಭ್ಯಾಸದ ಬಗ್ಗೆಯ ಪ್ರತಿಯೊಂದು ಚರ್ಚೆಯೂ ಕೊನೆಯಲ್ಲಿ ಜಾತಿ ಒಳಜಾತಿಗಳಲ್ಲೇ ಮುಕ್ತಾಯವಾಗುವುದರಿಂದ ಇದು ತುಂಬಾ ರಿಸ್ಕಿ ಬಿಸಿನೆಸ್‌! ಈ ವಿಚಾರದಲ್ಲಿ ಚೀನೀಯರ ನಿಯಮ ತುಂಬಾ ಸರಳವಾಗಿದೆ. ಸೂರ್ಯನಿಗೆ ಬೆನ್ನು ತೋರಿಸುತ್ತಾ ಓಡಾಡುವ ಯಾವುದೇ ಜೀವಿಯೂ ತಿನ್ನಲು ಅರ್ಹ ಅಂತೆ! ಅಂದರೆ ಮನುಷ್ಯನನ್ನು ಬಿಟ್ಟು ಇನ್ಯಾವ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳನ್ನಾದರೂ ತಿನ್ನಬಹುದು, ಯಾವುದೇ partiality ಇಲ್ಲ! ಗೂನು ಬೆನ್ನಾಗಿರುವ ವಯಸ್ಸಾದ ಮುದುಕ ಮುದುಕಿಯರು ಕೂಡ ಹುಷಾರಾಗಿ ಓಡಾಡಬೇಕೇನೋ. ಪರಿಸ್ಥಿತಿ ಹೀಗಿರುವಾಗ ಡಾರ್ವಿನ್ನನ ವಿಕಾಸವಾದ "survival of the fittest" ಇಲ್ಲಿ ನಿಜ ಏಕೆ ಆಗಲಿಲ್ಲವೋ. ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ತಿನ್ನುವ ಚಿಂಕಿಗಳಿಂದ ತಪ್ಪಿಸಿಕೊಳ್ಳಲು ಬೆನ್ನಿನ ಮೇಲೇ ಕಾಲು ಬೆಳೆಸಿಕೊಂಡು ಸೂರ್ಯನಿಗೆ ಹೊಟ್ಟೆ ತೋರಿಸಿಕೊಂಡು ಓಡಾಡುವ ಪ್ರಾಣಿ ಸಂತತಿಯೊಂದರ ವಿಕಾಸ ಚೀನಾದಲ್ಲಿ ಆಗಬೇಕಿತ್ತು! ವಿಕಾಸವಾದ ಇಂಗ್ಲಿಷ್‌ನಲ್ಲಿ ಇರುವುದರಿಂದ ಚೀನೀ ಪ್ರಾಣಿಗಳಿಗೆ ಓದಿ ಅರ್ಥ ಮಾಡಿಕೊಳ್ಳಲು ಕಷ್ಟವಾಗಿ ಹೀಗೆ ವಿಕಾಸವಾಗುವುದನ್ನೇ ಬಹುಶಃ ಮರೆತುಬಿಟ್ಟಿವೆ.
ಸರಿ, ಎರಡು ದಿನಗಳ ನಂತರ ನನ್ನ ಮತ್ತು ನನ್ನಿಬ್ಬರು ರೂಮೀಗಳ ದೇಹಗಳು "cass cafe"ಯ 'Rock Music'ಗೆ ತಾಳ ಹಾಕುತ್ತಾ ಮೂಲೆಯ ಟೇಬಲ್ಲೊಂದರಲ್ಲಿ ವಿರಾಜಮಾನವಾಗಿದ್ದವು. ಅವರಿಬ್ಬರ ಪ್ರಯೋಗದ ಬಲಿಪಶುವಾದ ನಾನು ಶೋಯಬ್‌ ಅಖ್ತರ್‌ ಬೌನ್ಸರ್‌ ಎದುರಿಸಲಿರುವ ಗಂಗೂಲಿಯಂತೆ ಸ್ವಲ್ಪ ನರ್ವಸ್‌ಗೆ ಒಳಗಾಗಿದ್ದೆ. ನನ್ನ ಸ್ನೇಹಿತರು ಮಾತ್ರ ಯಾವುದೋ ದೀರ್ಘವಾದ ಆಲೋಚನೆಯಲ್ಲಿದ್ದಂತೆ ಒಬ್ಬರ ಮುಖವನ್ನೊಬ್ಬರು ನೋಡುತ್ತಾ ಕುಳಿತಿದ್ದರು. "How are you guys doing today?" ಎಂದು ಉಲಿದ ಹೆಣ್ಣು ಧ್ವನಿಗೆ ಮೂವರೂ ತಿರುಗಿ ನೋಡಿದೆವು. ನಮ್ಮ ಆರ್ಡರ್‌ ತೆಗೆದುಕೊಳ್ಳುವುದೇ ಜೀವನದ ಪರಮ ಉದ್ದೇಶವೇನೋ ಎನ್ನುವಂತೆ ನಮ್ಮೆಡೆಗೇ ಕಾತರದಿಂದ ನೋಡುತ್ತಾ ನಿಂತಿದ್ದಳು ಆಕೆ. ಅವರಿಬ್ಬರೂ ಮಾತೇ ಆಡದ್ದರಿಂದ ನಾನೇ ಮುಂದಾಗಿ ಎರಡು ಆರ್ಡರ್‌ ಚಿಕನ್ ವಿಂಗ್ಸ್ ಮತ್ತು ನೆಂಚಿಕೊಳ್ಳಲು ರ್ಯಾಂಚ್‌ ಡ್ರೆಸ್ಸಿಂಗ್‌ ಹೇಳಿ ಸ್ನೇಹಿತರ ಒಪ್ಪಿಗೆಗೆ ಅವರ ಮುಖ ನೋಡಿದೆ. ನನ್ನ ರೂಮಿ ಬೇಡವೆನ್ನುವಂತೆ ತಲೆ ಆಡಿಸುತ್ತಾ ಕೇವಲ ಒಂದು ಚಿಕನ್‌ ವಿಂಗ್ಸ್‌ ಮತ್ತು ಜೊತೆಗೆ ಒಂದು ಆನಿಯನ್‌ ರಿಂಗ್ಸ್‌ ಕೊಡಲು ಹೇಳಿದ. ನನಗೆ ಆಶ್ಚರ್ಯ. ಚಿಕನ್‌ ತಿನ್ನಿಸುತ್ತೇವೆ ಎಂದು ಕರೆದುಕೊಂಡು ಬಂದು ಈರುಳ್ಳಿ ತಿನ್ನಿಸುತ್ತಿದ್ದಾರಲ್ಲ, ಎಂದು. "ಯಾಕ್ರೋ ಮಕ್ಕಳ್ರಾ, ನಾನೂ ಚಿಕನ್‌ ತಿನ್ನುತ್ತೇನೆ ಕಣ್ರೋ" ಎಂದು ಅವರ ಮೇಲೆ ರೇಗಿದೆ. ಒಮ್ಮೆಲೇ ನನಗೆ ಶಾಕ್‌ ಆಗುವಂತೆ "ನೀನು ಚಿಕನ್‌ ತಿನ್ನು, ಆನಿಯನ್‌ ರಿಂಗ್ಸ್‌ ನಮ್ಮಿಬ್ಬರಿಗೆ, ನಾವು ಚಿಕನ್‌ ತಿನ್ನಬಾರದು ಎಂದು ತೀರ್ಮಾನಿಸಿದ್ದೇವೆ" ಎನ್ನುವುದೇ? ಅವರನ್ನೇ ನಂಬಿಕೊಂಡು ಹೊಸದೊಂದು ಕೆಲನ ಸಾಧಿಸಲು ಬಂದಿದ್ದ ನನಗೆ ಹೇಗಾಗಿರಬೇಡ? ಕಷ್ಟಪಟ್ಟು ಚೇತರಿಸಿಕೊಂಡು ನಮ್ಮ ನಾಟಕ ನೋಡುತ್ತಾ ಅಲ್ಲೇ ನಿಂತಿದ್ದ "ಕಾಯಮ್ಮ"ಳಿಗೆ ಸ್ವಲ್ಪ ಹೊತ್ತು ಬಿಟ್ಟು ಬರಲು ಕೇಳಿಕೊಂಡು ದುರುಗುಟ್ಟಿಕೊಂಡು ಸ್ನೇಹಿತರ ಕಡೆ ನೋಡಿದೆ.
"ನೀವು ಕೋಳಿ ತಿಂದ ಪಾಪ ಎಲ್ಲಾ ನನ್ನ ತಲೆ ಮೇಲೆ ಕಟ್ಟಬೇಕು ಅಂತ ನನ್ನ ಇಲ್ಲಿ ತನಕ ಕರ್ಕೊಂಡು ಬಂದ್ರಾ?", ನೀರು ಕುಡಿಯುತ್ತಾ ದಬಾಯಿಸಿದೆ. ಅದಕ್ಕೆ ನನ್ನ ಸ್ನೇಹಿತ, "ಹಂಗೇನಲ್ಲ ಲೇ, ಇಂಡಿಯಾದಲ್ಲಿ ಕೋಳಿಗಳಿಗೆ ಗುನ್ಯಾ ಅಂತ ಹೊಸ ತರದ ರೋಗ ಬಂದಿದೆ ಅಂತೆ. ಈ ಕೋಳಿ ಜ್ವರ ಅಂತಾರಲ್ಲ, ಅದೇ ತರ ಅಂತ ಇಟ್ಟುಕೋ. ಆ ಕೋಳಿಗಳನ್ನ ತಿಂದ್ರೆ ಮನುಷ್ಯರಿಗೂ ಬರುತ್ತಂತೆ ಗುನ್ಯಾ. ಹಾಗಾಗಿ ರಿಸ್ಕ್‌ ಯಾಕೆ ಅಂತ ಇನ್ನೊಂದು ತಿಂಗಳು ಚಿಕನ್‌ ತಿನ್ನಬಾರ್ದು ಅಂದ್ಕೊಂಡಿದ್ದೀವಿ."
"ಇದ್ಯಾವುದ್ರೋ ಹೊಸ ರೋಗ? ನಾನು ಕೇಳೇ ಇಲ್ಲ....."
"ಹೂ ಕಣೋ ನಿನ್ನೆ ಇನ್ನೂ ಕನ್ನಡಪ್ರಭದಲ್ಲಿ ನೋಡಿದೆ. ತುಂಬಾ ಜನ ಚಿಕನ್‌ ತಿಂದು ಸಾಯ್ತಾ ಇದ್ದಾರಂತೆ."
ನನ್ನ ಮನಸ್ಸಿನಲ್ಲಿ ಸಣ್ಣ ಅನುಮಾನಗಳಿದ್ದರೂ, ಕೋಳಿಗಳ ಪುಕ್ಕವನ್ನೂ ಬಿಡದೆ ತಿನ್ನಬೇಕು ಎಂದು ನಂಬಿರುವ ಇವರಿಬ್ಬರು ಇನ್ನೊಂದು ತಿಂಗಳು ಕೋಳಿ ತಿನ್ನುವುದಿಲ್ಲ ಎಂದು ಹೇಳುತ್ತಿರುವುದರಿಂದ, ಕೋಳಿಗಳಿಗೆ ಗುನ್ಯಾ ಬಂದಿರುವುದು ನಿಜವೇ ಇರಬೇಕು ಅಂದುಕೊಂಡೆ. "ರೋಗ ಬಂದರೂ ಕ್ರಮ ಕೈಗೊಳ್ಳುವುದಿಲ್ಲ" ಎಂದು ವಿನಾಕಾರಣ ಸರ್ಕಾರಕ್ಕೆ ಬೈದು ನನ್ನ ಸಿಟ್ಟು ಸರ್ಕಾರದ ಮೇಲೆ ತೀರಿಸಿಕೊಂಡೆ. ಗುನ್ಯಾ ಬಂದ ಕೋಳಿ ತಿನ್ನಿಸಿ ನನ್ನ ಜೀವ ತೆಗೆದು ನನ್ನ ಇನ್ಶೂರೆನ್ಸ್ ಹೊಡೆಯುವ ಅವರಿಬ್ಬರ ಸಂಚಿನ ಬಗ್ಗೆಯೂ ರೇಗಿದೆ. ಯಥಾಪ್ರಕಾರ ಆನಿಯನ್‌ ರಿಂಗ್ಸ್‌ಗೆ ಜೀವ ತೃಪ್ತವಾಗಬೇಕಾಯ್ತು.
ಮನೆಗೆ ಬಂದು ಗೂಗಲ್‌ ಮಹಾಶಯರಲ್ಲಿ ಕೋಳಿಗಳಿಗೆ ಬಂದಿರುವ ಗುನ್ಯಾದ ವಿಚಾರ ಹೆಚ್ಚಿನ ಮಾಹಿತಿ ಒದಗಿಸುವಂತೆ ಕೇಳಿಕೊಂಡೆ. ಎಷ್ಟು ವಿಧದಲ್ಲಿ ಕೇಳಿದರೂ ಕೋಳಿಗೂ ಗುನ್ಯಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ ಗೂಗಲ್‌ ಮಹಾಶಯರು! ಕನ್ನಡಪ್ರಭದಲ್ಲಿಯೇ ನೋಡೋಣ ಎಂದುಕೊಂಡು ಪತ್ರಿಕೆಯ ವೆಬ್‌ಸೈಟ್ ತೆರೆದಾಗ ಮೊದಲ ಸುದ್ದಿಯೇ ಗುನ್ಯಾದ ಬಗ್ಗೆ ಕಣ್ಣಿಗೆ ಬಿತ್ತು. ಒಡನೆಯೇ ನನ್ನ ಸ್ನೇಹಿತರು ಕೋಳಿಗಳಿಗೆ ಗುನ್ಯಾ ಬಂದಿದೆ ಎಂದು ಏಕೆ ಅರ್ಥಮಾಡಿಕೊಂಡರು ಎಂಬುದೂ ತಿಳಿಯಿತು. 'ಚಿಕೂನ್‌ಗುನ್ಯಾ'ವನ್ನು ಚಿಕನ್ ಗುನ್ಯಾ ಮಾಡಿ ಓದಿ ವಿನಾಕಾರಣ ಕೋಳಿಗಳ ಮೇಲೆ ಅಪವಾದ ಹೊರಿಸಿದ ಅವರ ಬುದ್ಧಿವಂತಿಕೆಯ ಬಗ್ಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಈ ವಿಷಯ ಅಮೆರಿಕದ ಕೋಳಿಗಳಿಗೇನಾದರೂ ತಿಳಿದರೆ ಖಂಡಿತ ಅವರಿಬ್ಬರನ್ನು ಕ್ಷಮಿಸುವುದಿಲ್ಲ ಕೋಳಿಗಳು.
ನನಗಂತೂ ಈ ಘಟನೆ ನಡೆದ ನಂತರ ಚಿಕನ್‌ ನೋಡಿದಾಗಲೆಲ್ಲಾ ಯಾವುದೇ ಸಂಬಂಧ ಇಲ್ಲದಿದ್ದರೂ 'ಗುನ್ಯಾ' ರೋಗದ ನೆನಪೇ ಬಂದು ನಾನು ಚಿಕನ್‌ ತಿನ್ನದೇ ಇರುವುದಕ್ಕೆ ಮತ್ತೊಂದು ಕಾರಣದ ಸೇರ್ಪಡೆಯಾಗಿ, ನಾನು ಚಿಕನ್‌ ತಿನ್ನಲು ಪ್ರಾರಂಭಿಸುವ ಕಾರ್ಯಕ್ರಮ ಕನಿಷ್ಟ ಒಂದು ವರ್ಷ ಮುಂದಕ್ಕೆ ಹೋಗಿದೆ!

Tuesday, July 04, 2006

ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?

ಮೊನ್ನೆ ಪತ್ರಿಕೆಯಲ್ಲಿ ಹೆಲ್ಮೆಟ್‌ ಕಡ್ಡಾಯದ ಬಗ್ಗೆ ವರದಿಗಳನ್ನ ಓದುತ್ತಿದ್ದೆ. ಈ ಹೆಲ್ಮೆಟ್ ಕಡ್ಡಾಯ ಎನ್ನುವುದು ಒಂದು ರೀತಿಯ ಕಣ್ಣಾಮುಚ್ಚಾಲೆ. ಪ್ರತೀ ವರ್ಷವೂ ತಪ್ಪದೆ ನಡೆಯುವ, ಪ್ರತೀ ಹೊಸ ಸರ್ಕಾರ ಬಂದಾಗಲೂ ಜೀವ ಪಡೆಯುವ ಹೆಲ್ಮೆಟ್ ಆಟ ಸ್ವಲ ದಿನ ಪತ್ರಿಕೆಗಳಿಗೆ ಆಹಾರವಾಗಿ, ಹರಟುವ ಬಾಯಿಗಳಿಗೆ ಸ್ನ್ಯಾಕ್‌ ಆಗಿ ನಿಧಾನವಾಗಿ ಮೊದಲ ಪುಟದಿಂದ ಮೂರನೆ ಪುಟಕ್ಕೆ, ನಂತರ ಸಣ್ಣ ಸುದ್ದಿಯಾಗಿ ಕಾಣಿಸಿಕೊಂಡು ಕ್ರಮೇಣ ಕಣ್ಮರೆಯಾಗುತ್ತದೆ. ಹೆಲ್ಮೆಟ್ ಕಡ್ಡಾಯ ಬೇಕೇ ಬೇಡವೇ ಎಂಬ ತೀರ್ಮಾನ ಒತ್ತಟ್ಟಿಗಿರಲಿ. ಸಂಬಂಧಪಟ್ಟವರು ಅದರ ಬಗ್ಗೆ ಹೊಡೆದಾಡಲಿ. ನಾನೀಗ ಚರ್ಚಿಸಹೊರಟದ್ದು "ನಮ್ಮ ಜೀವ ರಕ್ಷಣೆ ನಮ್ಮ ಜವಾಬ್ಧಾರಿ, ಅದರ ಉಸಾಬರಿ ಸರ್ಕಾರಕ್ಕೆ ಬೇಡ" ಎನ್ನುವ ಹೆಲ್ಮೆಟ್ ವಿರೋಧಿಗಳ ಒಂದು ವಾದದ ಬಗ್ಗೆ.
ಒಮ್ಮೆ ಪ್ರಾಮಾಣಿಕವಾಗಿ ಯೋಚಿಸಿ ನೋಡಿ. "ಜೀವನ ಬೇಜಾರಾಯ್ತು, ಬದುಕಿದ್ದು ಸಾಕು, ಈಗ ಸಾಯುತ್ತೇನೆ" ಎಂದು ಜೀವನದ ಎಲ್ಲಾ ಹೊರೆಗಳನ್ನ ಕೆಳಗೆ ಬಿಸಾಡಿ ಹಾಯಾಗಿ ಸಾಯಲು ಎಂದಾದರೂ ಸಾಧ್ಯವೇ? ಮನುಷ್ಯ ಈ ಭೂಮಿಯ ಮೇಲೆ ಮೊದಲ ಹೆಜ್ಜೆ ಇಟ್ಟ ದಿನದಿಂದಲೂ ಜವಾಬ್ಧಾರಿಗಳನ್ನ ತಲೆಯ ಮೇಲೆ ಹೊತ್ತೇ ಬದುಕುತ್ತಾ ಇರುತ್ತಾನೆ. ನಮಗೆ ಇಷ್ಟ ಇರಲಿ ಬಿಡಲಿ, ಜವಾಬ್ಧಾರಿ ಎಂಬ ಲೋನನ್ನ ಯಾವ ಯಾವ ಬ್ಯಾಂಕಿನಿಂದ ತೆಗೆದುಕೊಂಡಿದ್ದೇವೋ, ಮರಳಿ ಆ ಬ್ಯಾಂಕುಗಳಿಗೆ ಪಾವತಿಸಲೇಬೇಕು. "ನಾನು free bird, ಸ್ವಚ್ಛಂದವಾಗಿ ಬದುಕುವುದಕ್ಕೇ ನಾನು ಹುಟ್ಟಿರುವುದು" ಎಂದು ಎಷ್ಟು ಹಾರಾಡಿದರೂ, responsibility ಎಂಬ ಬಲೆ ಒಂದಲ್ಲ ಒಂದು ಸಮಯದಲ್ಲಿ ಬಂದು ಮೈಮೇಲೆ ಬಿದ್ದೇ ಬೀಳುತ್ತದೆ. ಅಂತಹುದರಲ್ಲಿ ನಮ್ಮ ಜೀವ ನಮ್ಮ ಸೊತ್ತು ಮಾತ್ರ ಎಂದು ಹೇಗೆ ಹೇಳಲು ಸಾದ್ಯ? ನಮ್ಮ ಜೀವನದ ಬಗ್ಗೆ ಅಲಕ್ಷ್ಯ ಹೊಂದಿದರೆ ನಮ್ಮನ್ನು ನಂಬಿರುವವರು, ನಮ್ಮನ್ನು ಪ್ರೀತಿಸುವವರು, ಇವರೆಲ್ಲರಿಗೆ ಮೋಸ ಮಾಡಿದಂತೆ ಅಲ್ಲವೇ? ತಮ್ಮ ಮೊಮ್ಮಕ್ಕಳನ್ನ ಎತ್ತಿ ಆಡಿಸುವ ಕನಸು ಹೊತ್ತ ತಂದೆ ತಾಯಂದಿರು, ನಮ್ಮ ಜೊತೆ ಸಾಯಂಕಾಲಗಳನ್ನು ಕಳೆಯುವ ಕನಸು ಹೊತ್ತ ಸ್ನೇಹಿತರು, ಜೊತೆಯಲ್ಲಿ ಸಂಸಾರ ಮಾಡುವ ಕನಸು ಹೊತ್ತ ಪ್ರಿಯತಮ/ಮೆ ಮುಂತಾದವರ ಕನಸುಗಳಿಗೆ ಅರ್ಥವೇ ಇಲ್ಲವೇ?
ನಮ್ಮ ಜೀವದ ಮೇಲೆ ಅಧಿಕಾರವನ್ನ ನಮಗಿಂತ ಹೆಚ್ಚಾಗಿ ನಮ್ಮ ತಂದೆ ತಾಯಂದಿರು, ಬಂಧುಗಳು, ಸ್ನೇಹಿತರು ಹೊಂದಿರುತ್ತಾರೆ. ಏಕೆಂದರೆ ನಮಗೇನಾದರೂ ಆಗಿ ನಾವು ಸ್ವರ್ಗವಾಸಿಗಳಾದರೆ(ನಾನು ಸ್ವರ್ಗಕ್ಕೇ ಹೋಗುತ್ತೇನೆ, ನಿಮ್ಮ ಬಗ್ಗೆ ಗೊತ್ತಿಲ್ಲ) ವೇದನೆ ಅನುಭವಿಸುವವರು ಇವರು. ಮನಸಾರೆ ಪ್ರೀತಿಸುವ ಗಂಡ ಹೆಂಡತಿ, ಪ್ರಿಯತಮ/ಮೆಗೆ "ನಾನು ಸಾಯೋದು ನನ್ನ ಇಷ್ಟ, ನೀನ್ಯಾಕೆ ಅದರ ಬಗ್ಗೆ ತಲೆ ಕೆಡಿಸ್ಕೋಬೇಕು?" ಎಂದು ಹೇಳಿ ನೋಡಿ?
ಹೆಲ್ಮೆಟ್‌ ತೊಡದೆ ಇರುವುದಕ್ಕೆ "ಹೇರ್‌ಸ್ಟ್ಯೆಲ್‌ ಹಾಳಾಗುತ್ತದೆ" ಎಂಬ ಬಾಲಿಶ ಕಾರಣವನ್ನ ನಾನು ಬಹುಶ ಒಪ್ಪುತ್ತೇನೆ. ಆದರೆ ಈ ಮೇಲಿನ ಕಾರಣವನ್ನಲ್ಲ.

Thursday, June 08, 2006

ಭಾರತೀಯ dogಗಳ speciality!

ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರಿನಲ್ಲಿ "walking" ಎನ್ನುವ ಹೆಸರಿಗೆ ಅವಮಾನ ಮಾಡುವಂತೆ ತೆವಳಿಕೊಂಡು ಸಾಗುವ ೪೦ ಇಂಚು ಸುತ್ತಳತೆಯ ಹೊಟ್ಟೆಯ ಯಜಮಾನನನ್ನು ದರದರನೆ ಎಳೆದುಕೊಂಡು ಹೋಗುತ್ತಿರುತ್ತವೆ. ಇಂಗ್ಲಿಷ್‌ನಲ್ಲಿ "estop" ಎಂದರೆ ಮಾತ್ರ ಬ್ರೇಕ್‌ ಹಾಕುವ ಇವು ಕನ್ನಡದಲ್ಲಿ "ನಿಲ್ಲು" ಎಂದರೆ ನಿಮ್ಮನ್ನೇ ತಾತ್ಸಾರದಿಂದ ಕಾಣುವ risk ಇದೆ! ತಿನ್ನು ತಿನ್ನು ಎಂದು ಸಾವಿರ ಸರಿ ಕೂಗಿದರೂ ತಟ್ಟೆಗೆ ಬಾಯಿ ಹಾಕದ ಇವು "eat" ಅಂದ ತಕ್ಷಣ ಗಬಗಬನೆ ತಟ್ಟೆ ಖಾಲಿ ಮಾಡುತ್ತವೆ. "Stop please, eat please, pee please" ಎಂದು ಪ್ಲೀಸಬೇಕಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. 10 ವರ್ಷ ಮನೆಪಾಠ ಹೇಳಿಸಿಕೊಂಡು ಕಲಿತರೂ ಮನುಷ್ಯರಿಗೆ ಸಾಧಿಸದ ಇಂಗ್ಲಿಷ್ ಎಂಬ ಬ್ರಹ್ಮವಿದ್ಯೆ ನಾಯಿಗಳಿಗೆ ಇಷ್ಟು ಸುಲಭವಾಗಿದ್ದು ಮಾತ್ರ ಆಶ್ಚರ್ಯ.
ನನಗೆ ಯಾವಾಗಲೂ ನಗು ತರಿಸುವ ಸಂಗತಿಯೆಂದರೆ ಭಾರತೀಯರು ತಮ್ಮ ಸಾಕು ನಾಯಿಗಳಿಗೆ ಇಡುವ ಹೆಸರುಗಳು. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದರೂ, ಐದನೇ ಕ್ಲಾಸಿಗೇ ಓದಿಗೆ ಸಲಾಮ್ ನಮಸ್ತೆ ಅಂದಿದ್ದರೂ ನಾಯಿಗಳಿಗೆ ಹೆಸರಿಡುವಾಗ ಮಾತ್ರ ಅಮೆರಿಕನ್ನರನ್ನೂ ನಾಚಿಸುವಂತೆ ಹೊಸ ಹೊಸ ಇಂಗ್ಲಿಷ್‌ ಪದಗಳನ್ನು ಹುಡುಕುತ್ತೇವೆ. ಜಿಮ್ಮಿ ಜೂಲಿಯಿಂದ ಹಿಡಿದು happy, sad, tearsಗಳ ತನಕ ಭಾರತದಲ್ಲಿ ನಾಯಿಗಳು ನಾಮಕರಣ ಮಾಡಿಕೊಂಡಿವೆ. ಈ ನಾಯಿ ಬೆಕ್ಕುಗಳಿಗೆ ಇಂಗ್ಲಿಷ್‌ ಹೆಸರಿಡುವ ಪದ್ಧತಿ ಏಕಿರಬಹುದು? ಸ್ವಾತಂತ್ರಾಪೂರ್ವದಲ್ಲಿ ಬ್ರಿಟಿಷರ ಅನುಕರಣೆಯಾಗಿ ಹುಟ್ಟಿದ ಈ ಅಭ್ಯಾಸ ಹಾಗೆಯೇ ಉಳಿದುಕೊಂಡು ಬಂದಿದೆಯೇ? ಮದ್ರಾಸನ್ನು ಚೆನ್ನೈ ಮಾಡಿ, bangaloreಅನ್ನು ಬೆಂಗಳೂರು ಮಾಡಿದ ನಾವು ನಾಯಿಗಳ ಹೆಸರಿಡುವಾಗ ಮಾತ್ರ ಏಕೆ ಇನ್ನೂ ಗುಲಾಮರಾಗಿದ್ದೇವೆ? ನನಗೆ ಅನ್ನಿಸುವ ಪ್ರಕಾರ ನಾಯಿಗಳಿಗೆ ಇಂಗ್ಲಿಷ್ ಹೆಸರಿಡುವುದಕ್ಕೆ ಮತ್ತೊಂದು ಬಲವಾದ ಕಾರಣ ಇದೆ. ಈಗ ನೋಡಿ ಜಿಮ್ಮಿ, ವಿಕ್ಕಿ ಎಂದು ಹೆಸರಿಟ್ಟರೆ ಅದು ಭಾರತದಲ್ಲಿ ಯಾವುದೇ ಮನುಷ್ಯನ ಹೆಸರನ್ನೂ ಹೋಲುವುದಿಲ್ಲ. ಅದೇ ರಾಜು, ಸುಬ್ಬು ಎಂದೆಲ್ಲಾ ಇಟ್ಟರೆ ಅವರು ನಮ್ಮ ಆಚೀಚೆಯ ಸಂಭಂದಿಕರೇ ಆಗಿರಬಹುದು. ನಾಯಿಗಳಿಗೆ ಮನುಷ್ಯರ ಹೆಸರನ್ನು ಎಲ್ಲಾದರೂ ಇಡುವುದುಂಟೇ? ಬಹುಶ ಹೀಗೆ ಯಾರ ಹೆಸರಿಗೂ ಹೋಲದ ಹೊಸ ಹೆಸರನ್ನು ಪ್ರತೀ ಬಾರಿಯೂ ಹುಡುಕಬೇಕಾದ ಕಷ್ಟವನ್ನು ತಪ್ಪಿಸಲಿಕ್ಕಾಗಿಯೇ ಇಂಗ್ಲಿಷ್ ಹೆಸರಿಡುವ ಪದ್ಧತಿ ರೂಡಿಗೆ ಬಂದಿರಬಹುದು. ಆದರೆ ಹೊಸ ಹೊಸ ಇಂಗ್ಲಿಷ್‌ ಹೆಸರುಗಳನ್ನು ಹುಡುಕುವ ಭರಾಟೆಯಲ್ಲಿ ಅಪ್ಪಟ ದೇಸೀ ಹೆಸರುಗಳಾದ ನೀಲ,ಕೆಂಚ,ಕರಿಯಗಳನ್ನು ನಾಯಿಗಳು ಮರೆತಿದ್ದು ಮಾತ್ರ ದುಖದ ವಿಷಯ.

Wednesday, June 07, 2006

ಮದರಾಸಿನಿಂದ ಚೆನ್ನೈ ತನಕ

ಈಗ ಮೂರು ತಿಂಗಳ ಹಿಂದೆ ಕನ್ನಡಆಡಿಯೋ.ಕಾಮ್‌ಗಾಗಿ ಬರೆದ ಲಘುಹರಟೆ.

ಪ್ರಶಾಂತ್ ಅವರ ಮದರಾಸಿನ ಬಗ್ಗೆಯ ಲೇಖನ ಓದಿದಾಗ ನನಗೆ ನನ್ನ ಮದರಾಸಿನ ಅನುಭವವೂ ನೆನಪಿಗೆ ಬಂದು ಅದರ ಬಗ್ಗೆ ಸ್ವಲ್ಪ ಬರೆ(ಕೊರೆ?)ಯೋಣ ಅನ್ನಿಸಿತು. 'ಬರೆಯುವುದು ನನ್ನ ಧರ್ಮ, ಓದುವುದು ನಿಮ್ಮ ಕರ್ಮ' ಎಂಬುದು ನನ್ನ ಬಲವಾದ ನಂಬಿಕೆಯಾದ್ದರಿಂದ ನನ್ನ ಇತರ ತಪ್ಪುಗಳ ಜೊತೆಗೆ ಈ ಲಘು ಹರಟೆಯನ್ನೂ ಹೊಟ್ಟೆಗೆ ಹಾಕಿಕೊಳ್ಳತಕ್ಕದ್ದು.(ತಲೆಗೆ ಹಾಕಿಕೊಂಡರೆ ಇನ್ನೂ ಒಳ್ಳೆಯದು.)
ನಾನು ಮೊದಲ ಸಾರಿ ಮದರಾಸಿಗೆ ಹೋಗಿದ್ದು ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ. ಮನೆಯವರ ಜೊತೆ ತಮಿಳುನಾಡು, ಕೇರಳ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನಮ್ಮ "Route Map" ನಲ್ಲಿ ಮದರಾಸು ಕೂಡ ಒಂದು ಚುಕ್ಕೆಯಾಗಿತ್ತು. ಅಲ್ಲಿನ ಲಾಡ್ಜ್ ಒಂದರಲ್ಲಿ ಉಳಿದ ಸಂದರ್ಭದಲ್ಲಿ 'ಉಪ್ಪಿನಕಾಯಿ'ಗೆ ತಮಿಳಿನಲ್ಲಿ ಏನು ಹೇಳುತ್ತಾರೆ ಎಂದು ಗೊತ್ತಿಲ್ಲದೆ ತಮಿಳು ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿಲ್ಲದ ರೂಮ್‌ಬಾಯ್ ಒಬ್ಬನ ಕೈಲಿ ಉಪ್ಪಿನಕಾಯಿ ತರಿಸಲು ಅಪ್ಪ ಹೆಣಗಾಡಿದ್ದು, ಕೊನೆಗೂ ಆತ ಆಲೂಗಡ್ಡೆ ಪಲ್ಯ ತಂದುಕೊಟ್ಟಿದ್ದು ಬಿಟ್ಟರೆ ಆ ಮದರಾಸು ಪ್ರವಾಸದ ಬಗ್ಗೆ ಹೆಚ್ಚಿನದೇನೂ ನೆನಪಿಲ್ಲ.
ಎರಡನೆಯ ಬಾರಿ ನಾನು "ಚೆನ್ನೈ"ಗೆ ಹೋಗಬೇಕಾಗಿ ಬಂದದ್ದು ಈಗ ಎರಡು ವರ್ಷದ ಹಿಂದೆ. ಈ ಸಾರಿ ಪ್ರೇಕ್ಷಣೀಯ ಸ್ಥಳಗಳ ಪ್ರವಾಸಕ್ಕಲ್ಲ ಹೋಗಿದ್ದು. ಕಂಪೆನಿ ಕೆಲಸದ ಮೇಲೂ ಅಲ್ಲ. ಬದಲಿಗೆ ನನ್ನ ವೀಸಾ ಸ್ಟಾಂಪಿಂಗ್‌ಗೆ. ಹೋಗುವ ದಿನದ ಹದಿನೈದು ದಿನಗಳ ಮುಂಚೆ "ಕಾವೇರಿ ಎಕ್ಸ್‌ಪ್ರೆಸ್" ರೈಲಿನಲ್ಲಿ ರಿಸರ್ವ್ ಮಾಡಿಸಿ ನಂತರ ಅದರ ಬಗ್ಗೆ ಮರೆತೇಬಿಟ್ಟಿದ್ದೆ. ಹೊರಡಲು ಇನ್ನು ಎರಡು ದಿನ ಇದೆ ಎನ್ನುವಾಗಲೂ ಯಾವುದೇ ತಯಾರಿ ಮಾಡಿಕೊಳ್ಳದೆ ಊರು ಸುತ್ತುತ್ತಿದ್ದ ನನ್ನನ್ನು ನೋಡಿ, ನಾನು ಮರೆತಿದ್ದೇನೆ ಅನ್ನುವುದು ಖಚಿತವಾದ ನಂತರ ಅಮ್ಮ ನೆನಪಿಸಿದ ಮೇಲೇ ನನಗೆ ಚೆನ್ನೈ ಪುನಃ ನೆನಪಿಗೆ ಬಂದದ್ದು. ನನ್ನ ಬೇಜವಾಬ್ದಾರಿತನಗಳ ಸಮಸ್ತ ಪರಿಚವಯೂ ಇರುವುದರಿಂದ ಅಮ್ಮನಿಗೆ ಇದರಿಂದ ಆಶ್ಚರ್ಯವೇನೂ ಆಗಲಿಲ್ಲ ಬಿಡಿ. ನಾನು ಯಾವುದಾದರೂ ಊರಿಗೆ ಹೋಗುವಾಗ ತೆಗೆದುಕೊಂಡು ಹೋದ ಸಾಮಾನುಗಳನ್ನು ಜೋಪಾನವಾಗಿ ವಾಪಸ್ಸು ತಂದರೆ ಅದಕ್ಕಿಂತ ಅದ್ಭುತ ಮತ್ತೊಂದಿಲ್ಲ ಅನ್ನುವುದು ಅಮ್ಮನ ಖಚಿತ ಅಭಿಪ್ರಾಯ.
ಸರಿ, ತಯಾರಿ ಶುರುವಾಯ್ತು. ತಯಾರಿ ಅಂದರೆ ಇನ್ನೇನಿಲ್ಲ. ವೀಸಾಗೆ ಬೇಕಾದ ಡಾಕ್ಯುಮೆಂಟ್‌ಗಳನ್ನು ಒಟ್ಟಾಗಿ ಸರಿಯಾದ ರೀತಿಯಲ್ಲಿ ಜೋಡಿಸಬೇಕಿತ್ತಷ್ಟೆ. ನನಗೆ ಮತ್ತೊಂದು ಯೋಚನೆಯೂ ಇತ್ತು. ನಾನು ಯಾವತ್ತೂ, ಯಾವ ಊರಿಗೂ ಒಬ್ಬನೇ ಹೋಗಿ ಬಂದವನಲ್ಲ. ಜೊತೆಗೆ ಕಂಪೆನಿ ಕೊಡಲು ಒಂದು ಪಟಾಲಂ ಸ್ನೇಹಿತರು ಇರಲೇಬೇಕು. ಇಲ್ಲದಿದ್ದರೆ ಒಬ್ಬೊಬ್ಬನೇ ಓಡಾಡಲು ಬೋರ್ ಆಗಿ ಹೊರಗೆ ಹೋಗುವುದೇ ಇಲ್ಲ. ಆದರೆ ಈ ಸಾರ್ತಿ ದುರಾದೃಷ್ಟವಶಾತ್ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ busy ಇದ್ದಿದ್ದರಿಂದ ಯಾರೂ ಸಿಗಲೇ ಇಲ್ಲ. ಆದ್ದರಿಂದ ಚೆನ್ನೈನಲ್ಲಿ ಹೆಚ್ಚು ಹೊತ್ತು ಉಳಿಯದೆ ಕೆಲಸ ಮುಗಿದ ತಕ್ಷಣ ಹೊರಟು ಬಂದುಬಿಡಬೇಕೆಂದು ತೀರ್ಮಾನಿಸಿದೆ.
ನಾನು ರೈಲು ಹತ್ತುವಾಗ ಬೆಂಗಳೂರಿನಲ್ಲಿ ಸಣ್ಣಗೆ ಮಳೆ ಬರುತ್ತಿತ್ತು. ರೂಢಿಯಂತೆ ಸ್ವಲ್ಪ ಚಳಿಯೂ ಇತ್ತು. ರೈಲಿನಲ್ಲಿ ಸಿಕ್ಕ ಒಬ್ಬ ಪ್ರಯಾಣಿಕನ ಬಳಿ ಚೆನ್ನೈ ಬಗ್ಗೆ, ನಾನು ಹೋಗಬೇಕಾದ ಜಾಗದ ಬಗ್ಗೆ ವಿವರಗಳನ್ನು ಪಡೆಯುತ್ತಾ ಇದ್ದೆ. ಆತ ಕೊಟ್ಟ "ಅತ್ಯಮೂಲ್ಯ" ವಿವರಗಳು, ಸಲಹೆಗಳಲ್ಲಿ ಕೆಲವು -
೧. 'ಚೆನ್ನೈನಲ್ಲಿ ಸಿಟಿಬಸ್ ವ್ಯವಸ್ಥೆ ಬೆಂಗಳೂರಿನಂತೆ ಹದಗೆಟ್ಟಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಒಳ್ಳೆಯ ಫ್ರೀಕ್ವೆನ್ಸಿಯಲ್ಲಿ ಬಸ್ಸುಗಳು ಓಡಾಡುತ್ತಿರುತ್ತವೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಬಸ್ಸಿನಲ್ಲಿ ಒಂದು ಗಂಟೆಯ ಕಾಲಾವಧಿಯೊಳಗೆ ತಲುಪಬಹುದು.' ಆದರೆ ಚೆನ್ನೈಗೆ ಹೋಗಿ ಆ ಬಸ್ಸುಗಳನ್ನು ನೋಡಿದ ಮೇಲೆ ನನಗೆ ಭಾರಿ ಆಶಾಭಂಗವಾಯಿತು. ತಮ್ಮ ಮೈಮೇಲಿನ ಬಣ್ಣ ವನ್ನೆಲ್ಲಾ ಕಳೆದುಕೊಂಡು, ಅರ್ಧ ಮುರಿದ ಬಾಗಿಲೊಂದಿಗೆ ಅಸಹ್ಯವಾಗಿ ಕಾಣುವ ಇಲ್ಲಿನ ಮುದಿ ಬಸ್ಸುಗಳ ಮುಂದೆ ನಮ್ಮ ಬಿ.ಎಮ್.ಟಿ.ಸಿ. ಬಸ್ಸುಗಳು ಮಾಧುರಿ ದೀಕ್ಷಿತ್‌ಳ ರೀತಿ evergreen ಸುಂದರಿಯರಾಗಿ ಕಾಣುತ್ತವೆ.
೨. 'ಚೆನ್ನೈನಲ್ಲಿ ಅತ್ಯಂತ ದುಬಾರಿ ಎಂದರೆ ಆಟೋಗಳು. ಇದಕ್ಕೆ ಆಟೋಗಳ ಬ್ರಹತ್ ಸಂಖ್ಯೆಯೇ ಕಾರಣ. ಪಾಪ ಅವರ ಹೊಟ್ಟೆಯೂ ತುಂಬಬೇಡವೇ? ಯಾವ ಆಟೋ ಚಾಲಕನೂ ಮೀಟರ್ ತಿರುಗಿಸಿ ಕೈ ನೋವು ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅವರ ಮಿನಿಮಮ್ ದರ ಶುರುವಾಗುವುದೇ ನಲವತ್ತು ರುಪಾಯಿಯಿಂದ. ಮತ್ತು ಇದು ಎಷ್ಟೋ ಜಾಗಗಳಿಗೆ standard ದರ ಕೂಡ ಹೌದು.'
೩. 'ನಾನು ಹೋಗುತ್ತಿರುವುದು ಬೇಸಿಗೆಯ ಪೀಕ್ ಆದ್ದರಿಂದ ಸೆಖೆ ಸ್ವಲ್ಪ ಹೆಚ್ಚೇ ಇರುತ್ತದೆ. ಆದ್ದರಿಂದ ಬೆವರು ಒರೆಸಿಕೊಳ್ಳಲು ಜೊತೆಯಲ್ಲಿ ಯಾವಾಗಲೂ ಒಂದು ಕರ್ಚೀಪು ಇಟ್ಟುಕೊಳ್ಳುವುದು ಒಳ್ಳೆಯದು.'
ಇನ್ನೂ ಎಷ್ಟೋ ವಿಷಯಗಳನ್ನು ಆತ ಹೇಳಿದನಾದರೂ ನನಗೆ ಈಗ ನೆನಪಿರುವುದು ಇಷ್ಟೇ. ನಮ್ಮ ರೈಲು ತಮಿಳುನಾಡಿನ ಗಡಿಯನ್ನು ಆಗಲೇ ಪ್ರವೇಶಿಸಿಯಾಗಿತ್ತು. ಬೆಂಗಳೂರಿನ "pleasant weather" ನಿಂದ ಚೆನ್ನೈನ ಉರಿಬಿಸಿಲಿಗೆ ಮೈಕೊಟ್ಟು ಕಾವೇರಲು "ಕಾವೇರಿ ಎಕ್ಸ್‌ಪ್ರೆಸ್" ಕಾತುರಳಾಗಿದ್ದಾಳೇನೋ ಎಂಬಂತೆ ಬಹು ವೇಗವಾಗಿ ಓಡುತ್ತಿದ್ದಳು.
ಬೆಳಿಗ್ಗೆ ಚೆನ್ನೈ ರೈಲ್ವೆ ನಿಲ್ದಾಣದಿಂದ ಹೊರಗೆ ಬಂದಾಗ ಒಂದು ರೀತಿಯ ಮೀನಿನ ವಾಸನೆ ಮೂಗಿಗೆ ಬಡಿಯಿತು. ಸಮುದ್ರ ಹತ್ತಿರದಲ್ಲೆ ಇರುವುದರಿಂದ ಹೀಗೆ ಎಂದುಕೊಂಡು ಚಹ ಕುಡಿಯಲು ನಿಲ್ದಾಣದ ಮುಂದೆ ನಿಲ್ಲಿಸಿದ್ದ ಚಹ ಗಾಡಿಯತ್ತ ಹೋದೆ. ಒಮ್ಮೆಲೇ ನಾನು ಬಂದಿದ್ದು ಚೆನ್ನೈಗೋ ಅಥವ ಕಾವೇರಿ ದಾರಿ ತಪ್ಪಿ(ಹಳಿ ತಪ್ಪಿ?) ಆಂಧ್ರಪ್ರದೇಶಕ್ಕೆ ಕರೆದುಕೊಂಡು ಬಂದು ಬಿಟ್ಟಳೋ ಎಂದು ಅನುಮಾನ ಆಯಿತು. ಏಕೆಂದರೆ ಸುತ್ತಲೂ ರಾರಾಜಿಸುತ್ತಿದ್ದ ತೆಲುಗು ಭಾಷೆಯ ಬೋರ್ಡುಗಳು ಮತ್ತು ಬರೇ ತೆಲುಗು ಮಾತನಾಡಿಕೊಂಡು ಓಡಾಡುತ್ತಿದ್ದ ಜನ. ವಾಸ್ತವವಾಗಿ ಚೆನ್ನೈ ಆಂಧ್ರಪ್ರದೇಶಕ್ಕೆ ಸೇರಬೇಕಿತ್ತಂತೆ. ರಾಜ್ಯ ವಿಂಗಡಣೆಯ ಸಂಧರ್ಭದಲ್ಲಿ ತಮಿಳುನಾಡಿಗೆ ಚೆನ್ನೈ ಬೇಕೋ ಅಥವ ತಿರುಪತಿ ಬೇಕೋ ಎಂದು option ಕೊಟ್ಟಾಗ ಜನ ಚೆನ್ನೈಯೇ ಬೇಕು ಅಂದರಂತೆ. so ತಿರುಪತಿ ಆಂಧ್ರಕ್ಕೆ ಹೋಯಿತು. ಹಾಗಾಗಿ ಇವತ್ತಿಗೂ ಆಂಧ್ರ ಗಡಿಯಲ್ಲಿ ಇರುವ ಚೆನ್ನೈನಲ್ಲಿ ತೆಲುಗರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಮತ್ತು ತಮಿಳುನಾಡಿನ ಗಡಿಯಲ್ಲಿರುವ ತಿರುಪತಿಯಲ್ಲಿ ತಮಿಳರು ಅಧಿಕ ಸಂಖ್ಯೆಯಲ್ಲಿದ್ದಾರೆ. (ಈ ಕಥೆಯನ್ನು ನನಗೆ ನನ್ನ ಆಂಧ್ರ ಸ್ನೇಹಿತನೊಬ್ಬ ಹೇಳಿದ್ದು. ಇದರ validity ಬಗ್ಗೆ ನಾನು ಯಾವುದೇ ಗ್ಯಾರಂಟಿ ಕೊಡಲಾರೆ.)
ಸೂರ್ಯ ಆಗಿನ್ನೂ ತನ್ನ ಅಂದಕಾಲತ್ತಿಲ್ ಪ್ರೇಯಸಿ ಭೂಮಿಯನ್ನ ನೋಡಲೋ ಬೇಡವೋ ನೋಡಲೋ ಬೇಡವೋ ಎಂದು ನಾಚುತ್ತಲೇ ಕಿರುಗಣ್ಣಿನಲ್ಲೇ ಕಣ್ಣು ಹೊಡೆಯುತ್ತಿದ್ದರೂ ಚೆನ್ನೈನಲ್ಲಿ ಅಸಾಧ್ಯ ಸೆಖೆ ಇತ್ತು. ಬೆಳಗಿನ ಆ ಹೊತ್ತಿನಲ್ಲೇ ನಾನು ಬೆವರುತ್ತಿದ್ದೆ. ಹತ್ತಿರದಲ್ಲೇ ಇದ್ದ ಲಾಡ್ಜೊಂದರಲ್ಲಿ ನೆಪಮಾತ್ರಕ್ಕೆ ರೂಮ್ ಮಾಡಿ ಸ್ನಾನ ಇತ್ಯಾದಿಗಳನ್ನು ಮುಗಿಸಿದೆ. ನನ್ನ ವೀಸಾ ಸಂದರ್ಶನಕ್ಕೆ ಅಪಾಯಿಂಟ್ಮೆಂಟ್ ಇದ್ದದ್ದು ಬೆಳಿಗ್ಗೆ ಒಂಬತ್ತೂವರೆಗೆ. ಹಾಗಾಗಿ ನಾನು ಹೆಚ್ಚು ಸಮಯ ವೇಸ್ಟ್ ಮಾಡುವಂತಿರಲಿಲ್ಲ. ತಮಾಷೆಯಿರುವುದು ಇಲ್ಲಿಯೇ. ನನ್ನ ಬಳಿ ವಾಚ್ ಇರಲಿಲ್ಲ. ನನ್ನ ಸೆಲ್‌ಫೋನ್ ಕೂಡ ಬೆಂಗಳೂರಿನಲ್ಲೆ ಬಿಟ್ಟು ಬಂದಿದ್ದೆ. ಹಾಗಾಗಿ ನಿಖರವಾದ ಸಮಯ ನನಗೆ ಗೊತ್ತಿರಲಿಲ್ಲ ಮತ್ತು ನಾನು ಯಾರಲ್ಲೂ ಕೇಳಲೂ ಇಲ್ಲ. ಹೊರಗೆ ಸಾಕಷ್ಟು ಬಿಸಿಲಿತ್ತಾದ್ದರಿಂದ ಸಮಯ ಸುಮಾರು ಎಂಟು ಗಂಟೆಯಾಗಿರಬಹುದೆಂದು ಅಂದಾಜು ಮಾಡಿ, ಕನಿಷ್ಟಪಕ್ಷ ನಿಗದಿತ ಸಮಯದ ಹದಿನೈದು ನಿಮಿಷ ಮುಂಚಿತವಾಗಿಯಾದರೂ ಅಲ್ಲಿ ಸೇರಬೇಕೆಂದುಕೊಂಡು ಗಡಿಬಿಡಿಯಲ್ಲಿ ಹೊರಟೆ. ಬಣ್ಣಗೆಟ್ಟ ಬಸ್ಸುಗಳನ್ನು ನೋಡಿ ನಿರಾಸೆಯಾಯ್ತೆಂದು ಆಗಲೆ ಹೇಳಿದೆನಲ್ಲ. ಹಾಗಾಗಿ ಎಷ್ಟು ದುಡ್ಡಾದರೂ ಪರವಾಗಿಲ್ಲ, ಆಟೋದಲ್ಲೇ ಹೋಗುವುದೆಂದು ನಿಶ್ಚಯ ಮಾಡಿದೆ. ಲಾಡ್ಜಿನ ಹೊರಗೆ ರಸ್ತೆಗೆ ಬಂದೊಡನೆ ಆಟೋಗಳ ಸಮುದ್ರವೆ ಕಣ್ಣಿಗೆ ಬಿತ್ತಾದ್ದರಿಂದ ಆ ಸಮುದ್ರದಲ್ಲಿ ಒಂದು ಆಟೋ ಹೆಕ್ಕಿ ತೆಗೆಯುವುದೇನೂ ಕಷ್ಟವಾಗಲಿಲ್ಲ. ನಾನು ಹೋಗಬೇಕಾದ "Anna square" ಜಾಗದ ಹೆಸರು ಹೇಳುತ್ತಿದ್ದಂತೆ ಆಟೋ ಚಾಲಕ ತನ್ನ ಬಲಗೈಯ ನಾಲ್ಕು ಬೆರಳುಗಳನ್ನು ತೋರಿಸಿ ಯಾವುದೋ ಸಂಖ್ಯೆಯನ್ನು ಹೇಳಿದ. ಚೆನ್ನೈ ಆಟೋದವರ ಸ್ಟಾಂಡರ್ಡ್ ಫೇರ್ ಆದ 'ನಲವತ್ತ'ರ ಬಗ್ಗೆ ಈತ ಹೇಳುತ್ತಿದ್ದಾನೆ ಎಂಬುದು ಗೊತ್ತಾಗಿದ್ದರಿಂದ ಕಮಕ್ ಕಿಮಕ್ ಎನ್ನದೆ ಆಟೋ ಹತ್ತಿದೆ. ನಿಜ ಹೇಳಬೇಕೆಂದರೆ ಆತ ನಾಲ್ಕರ ಬದಲು ಕೈಕಾಲುಗಳನ್ನು ಒಟ್ಟು ಸೇರಿಸಿ ಇಪ್ಪತ್ತು ಬೆರಳು ತೋರಿಸಿದ್ದರೂ ನಾನು ಆತನ ಆಟೋ ಹತ್ತುತ್ತಿದ್ದೆ.
ಸರಿ, ಮುಂದುವರಿಯಿತು ಆಟೋ ಯಾವುದೇ ferrari ಕಾರಿಗೂ ಕಡಿಮೆಯಿರದ ವೇಗದಲ್ಲಿ. ಬೆಂಗಳೂರಿನಲ್ಲಿ ಮೈಮೇಲೇ ನುಗ್ಗುವ ಆಟೋಗಳಿಂದ ನಾನು ತರಬೇತಿ ಪಡೆದವನಾದ್ದರಿಂದ, ವೇಗವಾಗಿ ಆಟೋ ಓಡಿಸಿ ಈ ಪರರಾಜ್ಯದವನಿಗೆ ಚೆನ್ನೈ ಮೇಲೆ ಭಯ ಹುಟ್ಟಿಸಬೇಕೆಂಬ ಆಟೋ ಚಾಲಕನ ಕುತಂತ್ರವನ್ನು ನಾನು ವಿಫಲಗೊಳಿಸಿದ್ದಂತೂ ನಿಜ. ಹೊರಟ ಹತ್ತು ನಿಮಿಷಕ್ಕೆ anna square ಬಂತು. ಹತ್ತು ನಿಮಿಷದ ಪ್ರಯಾಣಕ್ಕೆ ನಲವತ್ತು ರೂಪಾಯಿ ಕಕ್ಕಿ ನಾನು ಅಮೆರಿಕ ವೀಸಾ ಕಾನ್ಸಲೇಟ್‌ನ ಕಡೆಗೆ ಹೆಜ್ಜೆ ಹಾಕಿದೆ. ಬಹಳ ಬಿಸಿಲಿದ್ದಿದ್ದರಿಂದಲೂ, ತೀವ್ರ ಸೆಖೆ ಇದ್ದಿದ್ದರಿಂದಲೂ ಸಮಯ ಸುಮಾರು ಒಂಬತ್ತು ಆಗಿರಬಹುದೆನ್ನುವುದೇ ನನ್ನ ಭಾವನೆ. ಕಾನ್ಸುಲೇಟ್ನ ಗೇಟ್ ಪ್ರವೇಶಿಸುತ್ತಿದವನನ್ನು ಸೆಕ್ಯುರಿಟಿ ಗಾರ್ಡ್ ತಡೆದು ನಯವಾಗಿ ಏನಾಗಬೇಕೆಂದು ವಿಚಾರಿಸಿದ. ನಾನು ನನ್ನ ಹತ್ತಿರವಿದ್ದ ಅಪಾಯಿಂಟ್‌ಮೆಂಟ್ ಲೆಟರ್ ಅವನತ್ತ ಚಾಚಿ, ಹೀಗೆ ಹೀಗೆ ಸಂದರ್ಶನಕ್ಕೆ ಬಂದಿದ್ದೇನೆ ಎಂದು ಹೇಳಿದೆ. ಸೆಕ್ಯುರಿಟಿ ಗಾರ್ಡ್ ಆಶ್ಚರ್ಯಗೊಂಡವನಂತೆ ತನ್ನ ಗಡಿಯಾರ ನೋಡಿ "ಈಗಿನ್ನೂ ಸಮಯ ಆರೂವರೆ. ಒಂಬತ್ತೂಕಾಲರ ಒಳಗೆ ನೀವು ಒಳಹೋಗುವುದಕ್ಕೆ ಆಗುವುದಿಲ್ಲ" ಅನ್ನುವುದೇ? ನನಗೆ ಒಮ್ಮೆಲೇ ಶಾಕ್ ಆದ ಹಾಗೆ ಆಯಿತು. ಆತನ ಗಡಿಯಾರ ನೋಡಿದೆ. ಗಂಟೆಯ ಮುಳ್ಳು 'ನಾನು ಇಲ್ಲಿಂದ ಅಲ್ಲಾಡಲಾರೆ' ಎಂಬಂತೆ ಭದ್ರವಾಗಿ ಆರು ಮತ್ತು ಏಳರ ಮದ್ಯೆ ಪ್ರತಿಷ್ಟಾಪನೆಯಾಗಿತ್ತು. ಮಧ್ಯಾನ ಊಟದ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗುವ ಸರ್ಕಾರಿ ಗುಮಾಸ್ತನ ರೀತಿ ನಿಮಿಷದ ಮುಳ್ಳು ಮೆಲ್ಲಗೆ ಆರನ್ನು ಬಿಟ್ಟು ಜಾಗ ಖಾಲಿ ಮಾಡುತ್ತಿತ್ತು. ಸೆಕೆಂಡಿನ ಮುಳ್ಳು ಮಾತ್ರ ಗುರಿ ಮುಟ್ಟುವ ತನಕ ನಿಲ್ಲಬಾರದೆಂದು ಮಿಲ್ಖಾ ಸಿಂಗ್‌ನ ರೀತಿ ಒಂದೇ ಸಮನೆ ಓಡುತ್ತಲೇ ಇತ್ತು. ಹೊರಬಂದು ಮತ್ತಿಬ್ಬರಲ್ಲಿ ಸಮಯ ಕೇಳಿ ಖಚಿತಪಡಿಸಿಕೊಂಡೆ. ಅಂದರೆ ಬೆಳಿಗ್ಗೆ ಆರೂವರೆಗೆ ಪ್ರಖರ ಬಿಸಿಲು ಮತ್ತು ಈ ಪಾಟಿ ಸೆಖೆ! ಸಾಗರ, ಚಿಕ್ಕಮಗಳೂರಿನಂತ ತಣ್ಣನೆಯ ಹವೆಯ ಊರುಗಳಲ್ಲೇ ಹುಟ್ಟಿ ಬೆಳೆದಿದ್ದ್ದ ನನಗೆ ಈ ರೀತಿಯ ವಾತಾವರನ ತೀರಾ ಹೊಸದು. ಆದ್ದರಿಂದಲೇ ಸಮಯದ ಬಗ್ಗೆ ನಾನು ಇಷ್ಟು ಯಡವಟ್ಟಾಗಿ ತಪ್ಪು ಊಹೆ ಮಾಡಿದ್ದು. ಇನ್ನು ಮೂರು ಗಂಟೆಗಳ ಕಾಲ ನಾನು ಹೊರಗೆ ಕಾಯಲೇಬೇಕಾಗಿತ್ತು. ತಿಂಡಿಯಾದರೂ ತಿನ್ನೋಣವೆಂದರೆ ಸಮೀಪದಲ್ಲೇ ಸ್ವಲ್ಪ ಚೆನ್ನಾಗಿ ಕಂಡ ಒಂದು ಹೋಟೆಲ್ ಕೂಡ ಏಳೂವರೆಗೆ ಬಾಗಿಲು ತೆಗೆಯುವುದಂತೆ. ಪತ್ರಿಕೆಯನ್ನಾದರೂ ಓದೋಣವೆಂದು ಅಲ್ಲೇ ಇದ್ದ ಪುಸ್ತಕದ ಅಂಗಡಿಗೆ ಹೋಗಿ "The Times of India" ಕೇಳಿದೆ. "ಚೆನ್ನೈನಲಿ ಇವತ್ತಿನ times ನಾಳೆಯೇ ಬರುವುದು. ಬೇಕಿದ್ದರೆ The Hindu ಓದಿ" ಎಂದು The Hindu ನನ್ನ ಕೈಗಿತ್ತ ಆ ಪುಣ್ಯಾತ್ಮ. ನನಗೆ ಸಮಯ ಕಳೆಯಲು ಓದಲು ಏನಾದರೂ ಇದ್ದರೆ ಸಾಕಿತ್ತು.
ಪೇಪರ್ ಹಿಡಿದುಕೊಂಡು ಅಂಗಡಿಯ ಮುಂದಿನ ಕಟ್ಟೆಯಲ್ಲಿ ಕುಳಿತರೆ ಎಲ್ಲರೂ ನನ್ನನ್ನ ವಿಚಿತ್ರವಾಗಿ ನೋಡುವವರೆ. ಆದರೆ ನನಗೆ ಹೋಗಲು ಬೇರೆ ಯಾವುದೆ ಜಾಗವಿಲ್ಲವಾದ್ದರಿಂದ ಈ ನೋಟಗಳಿಗೆ ಅಂಜಬಾರದೆಂದು ತೀರ್ಮಾನಿಸಿ ಎದ್ದು ಹೋಗದೆ ಅಲ್ಲಿಯೇ ಕುಳಿತಿದ್ದೆ ಏಳೂವರೆ ಆಗುವುದನ್ನೇ ಕಾಯುತ್ತಾ. ಹೋಟೆಲ್ ಬಾಗಿಲು ತೆರೆದೊಡನೆ ಬೋಣಿ ನಾನೇ. ಆಗಿನ್ನೂ ತಯರಾಗಿದ್ದ ಇಡ್ಲಿ, ವಡೆ ಮುಗಿಸಿ ಮತ್ತೆ ನನ್ನ ಸ್ವಸ್ಥಾನವಾದ ಅಂಗಡಿ ಕಟ್ಟೆಗೆ ವಾಪಸಾದೆ. ಕಾಯುವುದರ ಜೊತೆಗೆ ಸೆಖೆಯ ಕಾಟ ಬೇರೆ. ಸ್ವಲ್ಪ ಹೊತ್ತಿಗೆ ಮತ್ತೆ ಬೇಜಾರಾಗಿ ಅದೇ ಹೋಟೆಲಿಗೆ ಹೋಗಿ ಎರಡನೇ ಇನ್ನಿಂಗ್ಸ್ನಲ್ಲಿ ಮಸಾಲೆ ದೋಸೆ ಮುಗಿಸಿದೆ. ಅಂತೂ ಇಂತೂ ಹೇಗೋ ಮಾಡಿ, ಅಲ್ಲಿ ಇಲ್ಲಿ ಅಲೆದು, ನೆನಪಾದವರಿಗೆಲ್ಲಾ ಫೋನ್ ಮಾಡುತ್ತಾ ಮೂರು ಗಂಟೆಗಳ ಬಿಸಿಲಲ್ಲಿ ಕಾಯುವ ಶಿಕ್ಷೆಯನ್ನು ಮುಗಿಸಿದೆ.
ವೀಸಾ ಸಂದರ್ಶನ ಬಹು ಸುಲಭವಾಗಿ ಮುಗಿಯಿತು. ಕೇಳಿದ ೨-೩ ಪ್ರಶ್ನೆಗಳಲ್ಲೇ ಸರಿಯಾಗಿ ಸಮಯವನ್ನೂ ತಿಳಿಯಲು ಬಾರದ ನನ್ನಂತವರಿಗೆ ಭಾರತದಲ್ಲಿ ಇರಲು ಯೋಗ್ಯತೆಯೇ ಇಲ್ಲ ಅನ್ನುವುದನ್ನು ಅರ್ಥಮಾಡಿಕೊಂಡ ವೀಸಾ ಆಫೀಸರ್, "ಪಾಸ್ಪೋರ್ಟ್ ನನ್ನಲ್ಲಿಯೇ ಇರಲಿ, ಎರಡು ದಿನದ ನಂತರ ವೀಸಾ ಸ್ಟಾಂಪ್ನ ಜೊತೆಗೆ ಕಳಿಸಿಕೊಡುತ್ತೇನೆ" ಅಂದ. ನನ್ನ ಪಾಸ್ಪೋರ್ಟ್ ಮೇಲಿದ್ದ 'ಸಾಗರ' ಅನ್ನುವ ಊರು ಭೂಮಿಯ ಮೇಲೆ ಎಲ್ಲಿದೆ ಎನ್ನುವುದೇ ಆತನ ಬಹುದೊಡ್ಡ doubt ಆಗಿತ್ತು.
ಹೊರಬಂದು ಕಣ್ಣಿಗೆ ಬಿದ್ದ ಮೊದಲ ಆಟೋವನ್ನು ಕರೆದು ಆತ ತೋರಿಸಿದ ನಾಲ್ಕು ಬೆರಳಿಗೆ ಒಪ್ಪಿ ರೈಲ್ವೇ ಸ್ಟೇಷನ್ ಕಡೆ ಹೊರಟೆ. ಆದಷ್ತು ಬೇಗ ನನಗೆ ಬೆಂಗಳೂರು ಸೇರಬೇಕಿತ್ತು. ಆದರೆ ಆಟೋ ಡ್ರೈವರ್ ನನ್ನ ಪಾಡಿಗೆ ನನ್ನನ್ನು ಬಿಡಲೊಲ್ಲ. ನನಗೆ ತಮಿಳು ಬರುವುದಿಲ್ಲ ಎಂದು ಗೊತ್ತಾದ ಮೇಲೂ ಆತನ 'ತಮಿಳ್‌ಮಾಲೈ' ಪುಂಖಾನುಪುಂಖವಾಗಿ ಹರಿದೇ ಇತ್ತು. ಅದೇನು ಹೇಳುತ್ತಿದ್ದನೋ ನನಗೆ ನಯಾಪೈಸೆಯೂ ಅರ್ಥವಾಗುತ್ತಿರಲಿಲ್ಲ. ಆತನಿಗೋ ತಮಿಳು ಬಿಟ್ಟು ಬೇರೆಯ ಭಾಷೆ ಬಾರದು. ಕೊನೆಗೂ ಈ ಸಮಸ್ಯೆಗೆ ನಾನು ಪರಿಹಾರ ಕಂಡುಕೊಂಡೆ. ಆತ ತಮಿಳಿನಲ್ಲಿ ಮಾತನಾಡುತ್ತಿದ್ದ, ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೆ! ಆಶ್ಚರ್ಯವಾಗುವಂತೆ ಇಬ್ಬರಿಗೂ ಇಬ್ಬರ ಮಾತೂ ಅರ್ಥವಾಗತೊಡಗಿತು. ಹೀಗೆ ಸ್ವಲ್ಪ ಹೊತ್ತಿನ ಮಟ್ಟಿಗಾದರೂ ಚೆನ್ನೈನ ತ್ರಿಚಕ್ರ ವಾಹನವೊಂದರಲ್ಲಿ ಕೂತು ನಾನು ಮತ್ತು ಚಾಲಕ, ಭಾಷೆ ದೇಶಗಳ ಎಲ್ಲಾ ಮಿತಿಗಳನ್ನು ಮೀರಿ 'ವಿಶ್ವಮಾನವ'ರಾಗಿದ್ದೆವು.
ನಾನು ಉಳಿದಿದ್ದ ಹೋಟೆಲು ತಲುಪಿ ಬೆವರಿನಿಂದ ಸ್ನಾನ ಮಾಡಿದ್ದ ದೇಹಕ್ಕೆ ನೀರಿನಿಂದ ಸ್ನಾನ ಮಾಡಿಸಿ ಒಂದು ಒಳ್ಳೆಯ ಊಟ ಮಾಡಿ ಸ್ಟೇಷನ್ ತಲುಪಿದಾಗ ಬೆಂಗಳೂರಿಗೆ ಮುಂದಿನ ರೈಲು ಹೊರಡಲು ಕೇವಲ ಅರ್ಧ ಗಂಟೆ ಬಾಕಿ ಇತ್ತು. ಆದರೆ ಬಿಸಿ ಕಾವಲಿಯಾಗಿದ್ದ ರೈಲಿನ ಒಳಗೆ ಅರ್ಧ ಗಂಟೆ ಕೂತಿರುವುದೂ ಅಸಾಧ್ಯವಾಗಿತ್ತು. ಹೇಗೋ ಮಾಡಿ ಕಿಟಕಿ ಪಕ್ಕ ಒಂದು ಸೀಟು ಸಂಪಾದಿಸಿದೆ. ಬೆಂಗಳೂರು ತಲುಪುವವರೆಗೂ ನನಗೆ ಸಮಾಧಾನವೇ ಇಲ್ಲ. ಬೆಂಗಳೂರಿಗೆ ಬಂದು ಇಳಿದ ಮೇಲೆ ಇನ್ನೂ ಸಣ್ಣಗೆ ಮಳೆ ಹನಿಯುತ್ತಲೇ ಇದ್ದ ತಣ್ಣಗೆ ಹವೆಗೆ ಮೈಕೊಟ್ಟೂ ಸ್ಟ್ಟೇಷನ್ ಹತ್ತಿರವೇ ಗಾಡಿಯಲ್ಲಿ ಪಾನಿ ಪುರಿ ತಿನ್ನುವಾಗ ಬೆಂಗಳೂರಿನಂತ ಸ್ವರ್ಗ ಇನ್ನೊಂದಿಲ್ಲ ಎನ್ನಿಸಿತು.