ತೋಚಿದ್ದು......ಗೀಚಿದ್ದು

Thursday, June 08, 2006

ಭಾರತೀಯ dogಗಳ speciality!

ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರಿನಲ್ಲಿ "walking" ಎನ್ನುವ ಹೆಸರಿಗೆ ಅವಮಾನ ಮಾಡುವಂತೆ ತೆವಳಿಕೊಂಡು ಸಾಗುವ ೪೦ ಇಂಚು ಸುತ್ತಳತೆಯ ಹೊಟ್ಟೆಯ ಯಜಮಾನನನ್ನು ದರದರನೆ ಎಳೆದುಕೊಂಡು ಹೋಗುತ್ತಿರುತ್ತವೆ. ಇಂಗ್ಲಿಷ್‌ನಲ್ಲಿ "estop" ಎಂದರೆ ಮಾತ್ರ ಬ್ರೇಕ್‌ ಹಾಕುವ ಇವು ಕನ್ನಡದಲ್ಲಿ "ನಿಲ್ಲು" ಎಂದರೆ ನಿಮ್ಮನ್ನೇ ತಾತ್ಸಾರದಿಂದ ಕಾಣುವ risk ಇದೆ! ತಿನ್ನು ತಿನ್ನು ಎಂದು ಸಾವಿರ ಸರಿ ಕೂಗಿದರೂ ತಟ್ಟೆಗೆ ಬಾಯಿ ಹಾಕದ ಇವು "eat" ಅಂದ ತಕ್ಷಣ ಗಬಗಬನೆ ತಟ್ಟೆ ಖಾಲಿ ಮಾಡುತ್ತವೆ. "Stop please, eat please, pee please" ಎಂದು ಪ್ಲೀಸಬೇಕಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. 10 ವರ್ಷ ಮನೆಪಾಠ ಹೇಳಿಸಿಕೊಂಡು ಕಲಿತರೂ ಮನುಷ್ಯರಿಗೆ ಸಾಧಿಸದ ಇಂಗ್ಲಿಷ್ ಎಂಬ ಬ್ರಹ್ಮವಿದ್ಯೆ ನಾಯಿಗಳಿಗೆ ಇಷ್ಟು ಸುಲಭವಾಗಿದ್ದು ಮಾತ್ರ ಆಶ್ಚರ್ಯ.
ನನಗೆ ಯಾವಾಗಲೂ ನಗು ತರಿಸುವ ಸಂಗತಿಯೆಂದರೆ ಭಾರತೀಯರು ತಮ್ಮ ಸಾಕು ನಾಯಿಗಳಿಗೆ ಇಡುವ ಹೆಸರುಗಳು. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದರೂ, ಐದನೇ ಕ್ಲಾಸಿಗೇ ಓದಿಗೆ ಸಲಾಮ್ ನಮಸ್ತೆ ಅಂದಿದ್ದರೂ ನಾಯಿಗಳಿಗೆ ಹೆಸರಿಡುವಾಗ ಮಾತ್ರ ಅಮೆರಿಕನ್ನರನ್ನೂ ನಾಚಿಸುವಂತೆ ಹೊಸ ಹೊಸ ಇಂಗ್ಲಿಷ್‌ ಪದಗಳನ್ನು ಹುಡುಕುತ್ತೇವೆ. ಜಿಮ್ಮಿ ಜೂಲಿಯಿಂದ ಹಿಡಿದು happy, sad, tearsಗಳ ತನಕ ಭಾರತದಲ್ಲಿ ನಾಯಿಗಳು ನಾಮಕರಣ ಮಾಡಿಕೊಂಡಿವೆ. ಈ ನಾಯಿ ಬೆಕ್ಕುಗಳಿಗೆ ಇಂಗ್ಲಿಷ್‌ ಹೆಸರಿಡುವ ಪದ್ಧತಿ ಏಕಿರಬಹುದು? ಸ್ವಾತಂತ್ರಾಪೂರ್ವದಲ್ಲಿ ಬ್ರಿಟಿಷರ ಅನುಕರಣೆಯಾಗಿ ಹುಟ್ಟಿದ ಈ ಅಭ್ಯಾಸ ಹಾಗೆಯೇ ಉಳಿದುಕೊಂಡು ಬಂದಿದೆಯೇ? ಮದ್ರಾಸನ್ನು ಚೆನ್ನೈ ಮಾಡಿ, bangaloreಅನ್ನು ಬೆಂಗಳೂರು ಮಾಡಿದ ನಾವು ನಾಯಿಗಳ ಹೆಸರಿಡುವಾಗ ಮಾತ್ರ ಏಕೆ ಇನ್ನೂ ಗುಲಾಮರಾಗಿದ್ದೇವೆ? ನನಗೆ ಅನ್ನಿಸುವ ಪ್ರಕಾರ ನಾಯಿಗಳಿಗೆ ಇಂಗ್ಲಿಷ್ ಹೆಸರಿಡುವುದಕ್ಕೆ ಮತ್ತೊಂದು ಬಲವಾದ ಕಾರಣ ಇದೆ. ಈಗ ನೋಡಿ ಜಿಮ್ಮಿ, ವಿಕ್ಕಿ ಎಂದು ಹೆಸರಿಟ್ಟರೆ ಅದು ಭಾರತದಲ್ಲಿ ಯಾವುದೇ ಮನುಷ್ಯನ ಹೆಸರನ್ನೂ ಹೋಲುವುದಿಲ್ಲ. ಅದೇ ರಾಜು, ಸುಬ್ಬು ಎಂದೆಲ್ಲಾ ಇಟ್ಟರೆ ಅವರು ನಮ್ಮ ಆಚೀಚೆಯ ಸಂಭಂದಿಕರೇ ಆಗಿರಬಹುದು. ನಾಯಿಗಳಿಗೆ ಮನುಷ್ಯರ ಹೆಸರನ್ನು ಎಲ್ಲಾದರೂ ಇಡುವುದುಂಟೇ? ಬಹುಶ ಹೀಗೆ ಯಾರ ಹೆಸರಿಗೂ ಹೋಲದ ಹೊಸ ಹೆಸರನ್ನು ಪ್ರತೀ ಬಾರಿಯೂ ಹುಡುಕಬೇಕಾದ ಕಷ್ಟವನ್ನು ತಪ್ಪಿಸಲಿಕ್ಕಾಗಿಯೇ ಇಂಗ್ಲಿಷ್ ಹೆಸರಿಡುವ ಪದ್ಧತಿ ರೂಡಿಗೆ ಬಂದಿರಬಹುದು. ಆದರೆ ಹೊಸ ಹೊಸ ಇಂಗ್ಲಿಷ್‌ ಹೆಸರುಗಳನ್ನು ಹುಡುಕುವ ಭರಾಟೆಯಲ್ಲಿ ಅಪ್ಪಟ ದೇಸೀ ಹೆಸರುಗಳಾದ ನೀಲ,ಕೆಂಚ,ಕರಿಯಗಳನ್ನು ನಾಯಿಗಳು ಮರೆತಿದ್ದು ಮಾತ್ರ ದುಖದ ವಿಷಯ.

3 Comments:

  • I don't think this is always true. At one of my friends house, they have a dog, which can understand both kannada and english. They give instruction to the dog mostly in kannada.

    By Blogger Vijay Nag, at 11:46 PM  

  • ಬಹಳ ತಮಾಷೆಯಾಗಿ ಬರೆದಿದ್ದೀರ. ನನಗೆ ನಾಯಿಗಳು ಅಂದ್ರೆ ಅಲರ್ಜಿ. ಅವುಗಳಿಗೆ ಯಾವ ಭಾಷೆ ಬರತ್ತೋ ಗೊತ್ತಿಲ್ಲ. ಕಲ್ಲು ಹೊಡೆದ್ರೆ ಕುಂಯ್ ಕುಂಯ್ ಅಂತ ಅರಚತ್ವೆ ಇಲ್ಲಾಂದ್ರೆ ಬೌ ಬೌ ಅಂತ ಮೈ ಮೇಲೆ ಹಾರಿ ಬರತ್ವೆ ಅಂತ ಮಾತ್ರ ಗೊತ್ತಿತ್ತು. ನೀವು ಒಳ್ಳೆಯ ಸಂಶೋಧನೆ ಮಾಡಿದ್ದೀರಿ.

    ಲೇಖನದ ವೈಖರಿ ನನಗೆ ಬಹಳವಾಗಿ ಹಿಡಿಸ್ತು. ಬರಹದ ಕ್ರಾಂತಿ ನಿಲ್ಲಿಸಬೇಡಿ. ಮುಂದುವರೆಯುತ್ತಿರಲಿ.

    By Blogger bhadra, at 12:32 AM  

  • ತುಂಬಾ ತಮಾಷೆಯಾಗಿದೆ. ಹೌದು,ನಾನು ನೋಡಿರುವ ನಾಯಿಗಳಿಗೆಲ್ಲ ಇಂಗ್ಲೀಷ್ ಹೆಸರು. ಇಂಗ್ಲೀಷ್ ಮಾತ್ರ ಬರೋದು ಅವಕ್ಕೆ.

    By Blogger sritri, at 9:00 AM  

Post a Comment

<< Home