ತೋಚಿದ್ದು......ಗೀಚಿದ್ದು

Wednesday, June 07, 2006

ಮದರಾಸಿನಿಂದ ಚೆನ್ನೈ ತನಕ

ಈಗ ಮೂರು ತಿಂಗಳ ಹಿಂದೆ ಕನ್ನಡಆಡಿಯೋ.ಕಾಮ್‌ಗಾಗಿ ಬರೆದ ಲಘುಹರಟೆ.

ಪ್ರಶಾಂತ್ ಅವರ ಮದರಾಸಿನ ಬಗ್ಗೆಯ ಲೇಖನ ಓದಿದಾಗ ನನಗೆ ನನ್ನ ಮದರಾಸಿನ ಅನುಭವವೂ ನೆನಪಿಗೆ ಬಂದು ಅದರ ಬಗ್ಗೆ ಸ್ವಲ್ಪ ಬರೆ(ಕೊರೆ?)ಯೋಣ ಅನ್ನಿಸಿತು. 'ಬರೆಯುವುದು ನನ್ನ ಧರ್ಮ, ಓದುವುದು ನಿಮ್ಮ ಕರ್ಮ' ಎಂಬುದು ನನ್ನ ಬಲವಾದ ನಂಬಿಕೆಯಾದ್ದರಿಂದ ನನ್ನ ಇತರ ತಪ್ಪುಗಳ ಜೊತೆಗೆ ಈ ಲಘು ಹರಟೆಯನ್ನೂ ಹೊಟ್ಟೆಗೆ ಹಾಕಿಕೊಳ್ಳತಕ್ಕದ್ದು.(ತಲೆಗೆ ಹಾಕಿಕೊಂಡರೆ ಇನ್ನೂ ಒಳ್ಳೆಯದು.)
ನಾನು ಮೊದಲ ಸಾರಿ ಮದರಾಸಿಗೆ ಹೋಗಿದ್ದು ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ. ಮನೆಯವರ ಜೊತೆ ತಮಿಳುನಾಡು, ಕೇರಳ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನಮ್ಮ "Route Map" ನಲ್ಲಿ ಮದರಾಸು ಕೂಡ ಒಂದು ಚುಕ್ಕೆಯಾಗಿತ್ತು. ಅಲ್ಲಿನ ಲಾಡ್ಜ್ ಒಂದರಲ್ಲಿ ಉಳಿದ ಸಂದರ್ಭದಲ್ಲಿ 'ಉಪ್ಪಿನಕಾಯಿ'ಗೆ ತಮಿಳಿನಲ್ಲಿ ಏನು ಹೇಳುತ್ತಾರೆ ಎಂದು ಗೊತ್ತಿಲ್ಲದೆ ತಮಿಳು ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿಲ್ಲದ ರೂಮ್‌ಬಾಯ್ ಒಬ್ಬನ ಕೈಲಿ ಉಪ್ಪಿನಕಾಯಿ ತರಿಸಲು ಅಪ್ಪ ಹೆಣಗಾಡಿದ್ದು, ಕೊನೆಗೂ ಆತ ಆಲೂಗಡ್ಡೆ ಪಲ್ಯ ತಂದುಕೊಟ್ಟಿದ್ದು ಬಿಟ್ಟರೆ ಆ ಮದರಾಸು ಪ್ರವಾಸದ ಬಗ್ಗೆ ಹೆಚ್ಚಿನದೇನೂ ನೆನಪಿಲ್ಲ.
ಎರಡನೆಯ ಬಾರಿ ನಾನು "ಚೆನ್ನೈ"ಗೆ ಹೋಗಬೇಕಾಗಿ ಬಂದದ್ದು ಈಗ ಎರಡು ವರ್ಷದ ಹಿಂದೆ. ಈ ಸಾರಿ ಪ್ರೇಕ್ಷಣೀಯ ಸ್ಥಳಗಳ ಪ್ರವಾಸಕ್ಕಲ್ಲ ಹೋಗಿದ್ದು. ಕಂಪೆನಿ ಕೆಲಸದ ಮೇಲೂ ಅಲ್ಲ. ಬದಲಿಗೆ ನನ್ನ ವೀಸಾ ಸ್ಟಾಂಪಿಂಗ್‌ಗೆ. ಹೋಗುವ ದಿನದ ಹದಿನೈದು ದಿನಗಳ ಮುಂಚೆ "ಕಾವೇರಿ ಎಕ್ಸ್‌ಪ್ರೆಸ್" ರೈಲಿನಲ್ಲಿ ರಿಸರ್ವ್ ಮಾಡಿಸಿ ನಂತರ ಅದರ ಬಗ್ಗೆ ಮರೆತೇಬಿಟ್ಟಿದ್ದೆ. ಹೊರಡಲು ಇನ್ನು ಎರಡು ದಿನ ಇದೆ ಎನ್ನುವಾಗಲೂ ಯಾವುದೇ ತಯಾರಿ ಮಾಡಿಕೊಳ್ಳದೆ ಊರು ಸುತ್ತುತ್ತಿದ್ದ ನನ್ನನ್ನು ನೋಡಿ, ನಾನು ಮರೆತಿದ್ದೇನೆ ಅನ್ನುವುದು ಖಚಿತವಾದ ನಂತರ ಅಮ್ಮ ನೆನಪಿಸಿದ ಮೇಲೇ ನನಗೆ ಚೆನ್ನೈ ಪುನಃ ನೆನಪಿಗೆ ಬಂದದ್ದು. ನನ್ನ ಬೇಜವಾಬ್ದಾರಿತನಗಳ ಸಮಸ್ತ ಪರಿಚವಯೂ ಇರುವುದರಿಂದ ಅಮ್ಮನಿಗೆ ಇದರಿಂದ ಆಶ್ಚರ್ಯವೇನೂ ಆಗಲಿಲ್ಲ ಬಿಡಿ. ನಾನು ಯಾವುದಾದರೂ ಊರಿಗೆ ಹೋಗುವಾಗ ತೆಗೆದುಕೊಂಡು ಹೋದ ಸಾಮಾನುಗಳನ್ನು ಜೋಪಾನವಾಗಿ ವಾಪಸ್ಸು ತಂದರೆ ಅದಕ್ಕಿಂತ ಅದ್ಭುತ ಮತ್ತೊಂದಿಲ್ಲ ಅನ್ನುವುದು ಅಮ್ಮನ ಖಚಿತ ಅಭಿಪ್ರಾಯ.
ಸರಿ, ತಯಾರಿ ಶುರುವಾಯ್ತು. ತಯಾರಿ ಅಂದರೆ ಇನ್ನೇನಿಲ್ಲ. ವೀಸಾಗೆ ಬೇಕಾದ ಡಾಕ್ಯುಮೆಂಟ್‌ಗಳನ್ನು ಒಟ್ಟಾಗಿ ಸರಿಯಾದ ರೀತಿಯಲ್ಲಿ ಜೋಡಿಸಬೇಕಿತ್ತಷ್ಟೆ. ನನಗೆ ಮತ್ತೊಂದು ಯೋಚನೆಯೂ ಇತ್ತು. ನಾನು ಯಾವತ್ತೂ, ಯಾವ ಊರಿಗೂ ಒಬ್ಬನೇ ಹೋಗಿ ಬಂದವನಲ್ಲ. ಜೊತೆಗೆ ಕಂಪೆನಿ ಕೊಡಲು ಒಂದು ಪಟಾಲಂ ಸ್ನೇಹಿತರು ಇರಲೇಬೇಕು. ಇಲ್ಲದಿದ್ದರೆ ಒಬ್ಬೊಬ್ಬನೇ ಓಡಾಡಲು ಬೋರ್ ಆಗಿ ಹೊರಗೆ ಹೋಗುವುದೇ ಇಲ್ಲ. ಆದರೆ ಈ ಸಾರ್ತಿ ದುರಾದೃಷ್ಟವಶಾತ್ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ busy ಇದ್ದಿದ್ದರಿಂದ ಯಾರೂ ಸಿಗಲೇ ಇಲ್ಲ. ಆದ್ದರಿಂದ ಚೆನ್ನೈನಲ್ಲಿ ಹೆಚ್ಚು ಹೊತ್ತು ಉಳಿಯದೆ ಕೆಲಸ ಮುಗಿದ ತಕ್ಷಣ ಹೊರಟು ಬಂದುಬಿಡಬೇಕೆಂದು ತೀರ್ಮಾನಿಸಿದೆ.
ನಾನು ರೈಲು ಹತ್ತುವಾಗ ಬೆಂಗಳೂರಿನಲ್ಲಿ ಸಣ್ಣಗೆ ಮಳೆ ಬರುತ್ತಿತ್ತು. ರೂಢಿಯಂತೆ ಸ್ವಲ್ಪ ಚಳಿಯೂ ಇತ್ತು. ರೈಲಿನಲ್ಲಿ ಸಿಕ್ಕ ಒಬ್ಬ ಪ್ರಯಾಣಿಕನ ಬಳಿ ಚೆನ್ನೈ ಬಗ್ಗೆ, ನಾನು ಹೋಗಬೇಕಾದ ಜಾಗದ ಬಗ್ಗೆ ವಿವರಗಳನ್ನು ಪಡೆಯುತ್ತಾ ಇದ್ದೆ. ಆತ ಕೊಟ್ಟ "ಅತ್ಯಮೂಲ್ಯ" ವಿವರಗಳು, ಸಲಹೆಗಳಲ್ಲಿ ಕೆಲವು -
೧. 'ಚೆನ್ನೈನಲ್ಲಿ ಸಿಟಿಬಸ್ ವ್ಯವಸ್ಥೆ ಬೆಂಗಳೂರಿನಂತೆ ಹದಗೆಟ್ಟಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಒಳ್ಳೆಯ ಫ್ರೀಕ್ವೆನ್ಸಿಯಲ್ಲಿ ಬಸ್ಸುಗಳು ಓಡಾಡುತ್ತಿರುತ್ತವೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಬಸ್ಸಿನಲ್ಲಿ ಒಂದು ಗಂಟೆಯ ಕಾಲಾವಧಿಯೊಳಗೆ ತಲುಪಬಹುದು.' ಆದರೆ ಚೆನ್ನೈಗೆ ಹೋಗಿ ಆ ಬಸ್ಸುಗಳನ್ನು ನೋಡಿದ ಮೇಲೆ ನನಗೆ ಭಾರಿ ಆಶಾಭಂಗವಾಯಿತು. ತಮ್ಮ ಮೈಮೇಲಿನ ಬಣ್ಣ ವನ್ನೆಲ್ಲಾ ಕಳೆದುಕೊಂಡು, ಅರ್ಧ ಮುರಿದ ಬಾಗಿಲೊಂದಿಗೆ ಅಸಹ್ಯವಾಗಿ ಕಾಣುವ ಇಲ್ಲಿನ ಮುದಿ ಬಸ್ಸುಗಳ ಮುಂದೆ ನಮ್ಮ ಬಿ.ಎಮ್.ಟಿ.ಸಿ. ಬಸ್ಸುಗಳು ಮಾಧುರಿ ದೀಕ್ಷಿತ್‌ಳ ರೀತಿ evergreen ಸುಂದರಿಯರಾಗಿ ಕಾಣುತ್ತವೆ.
೨. 'ಚೆನ್ನೈನಲ್ಲಿ ಅತ್ಯಂತ ದುಬಾರಿ ಎಂದರೆ ಆಟೋಗಳು. ಇದಕ್ಕೆ ಆಟೋಗಳ ಬ್ರಹತ್ ಸಂಖ್ಯೆಯೇ ಕಾರಣ. ಪಾಪ ಅವರ ಹೊಟ್ಟೆಯೂ ತುಂಬಬೇಡವೇ? ಯಾವ ಆಟೋ ಚಾಲಕನೂ ಮೀಟರ್ ತಿರುಗಿಸಿ ಕೈ ನೋವು ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅವರ ಮಿನಿಮಮ್ ದರ ಶುರುವಾಗುವುದೇ ನಲವತ್ತು ರುಪಾಯಿಯಿಂದ. ಮತ್ತು ಇದು ಎಷ್ಟೋ ಜಾಗಗಳಿಗೆ standard ದರ ಕೂಡ ಹೌದು.'
೩. 'ನಾನು ಹೋಗುತ್ತಿರುವುದು ಬೇಸಿಗೆಯ ಪೀಕ್ ಆದ್ದರಿಂದ ಸೆಖೆ ಸ್ವಲ್ಪ ಹೆಚ್ಚೇ ಇರುತ್ತದೆ. ಆದ್ದರಿಂದ ಬೆವರು ಒರೆಸಿಕೊಳ್ಳಲು ಜೊತೆಯಲ್ಲಿ ಯಾವಾಗಲೂ ಒಂದು ಕರ್ಚೀಪು ಇಟ್ಟುಕೊಳ್ಳುವುದು ಒಳ್ಳೆಯದು.'
ಇನ್ನೂ ಎಷ್ಟೋ ವಿಷಯಗಳನ್ನು ಆತ ಹೇಳಿದನಾದರೂ ನನಗೆ ಈಗ ನೆನಪಿರುವುದು ಇಷ್ಟೇ. ನಮ್ಮ ರೈಲು ತಮಿಳುನಾಡಿನ ಗಡಿಯನ್ನು ಆಗಲೇ ಪ್ರವೇಶಿಸಿಯಾಗಿತ್ತು. ಬೆಂಗಳೂರಿನ "pleasant weather" ನಿಂದ ಚೆನ್ನೈನ ಉರಿಬಿಸಿಲಿಗೆ ಮೈಕೊಟ್ಟು ಕಾವೇರಲು "ಕಾವೇರಿ ಎಕ್ಸ್‌ಪ್ರೆಸ್" ಕಾತುರಳಾಗಿದ್ದಾಳೇನೋ ಎಂಬಂತೆ ಬಹು ವೇಗವಾಗಿ ಓಡುತ್ತಿದ್ದಳು.
ಬೆಳಿಗ್ಗೆ ಚೆನ್ನೈ ರೈಲ್ವೆ ನಿಲ್ದಾಣದಿಂದ ಹೊರಗೆ ಬಂದಾಗ ಒಂದು ರೀತಿಯ ಮೀನಿನ ವಾಸನೆ ಮೂಗಿಗೆ ಬಡಿಯಿತು. ಸಮುದ್ರ ಹತ್ತಿರದಲ್ಲೆ ಇರುವುದರಿಂದ ಹೀಗೆ ಎಂದುಕೊಂಡು ಚಹ ಕುಡಿಯಲು ನಿಲ್ದಾಣದ ಮುಂದೆ ನಿಲ್ಲಿಸಿದ್ದ ಚಹ ಗಾಡಿಯತ್ತ ಹೋದೆ. ಒಮ್ಮೆಲೇ ನಾನು ಬಂದಿದ್ದು ಚೆನ್ನೈಗೋ ಅಥವ ಕಾವೇರಿ ದಾರಿ ತಪ್ಪಿ(ಹಳಿ ತಪ್ಪಿ?) ಆಂಧ್ರಪ್ರದೇಶಕ್ಕೆ ಕರೆದುಕೊಂಡು ಬಂದು ಬಿಟ್ಟಳೋ ಎಂದು ಅನುಮಾನ ಆಯಿತು. ಏಕೆಂದರೆ ಸುತ್ತಲೂ ರಾರಾಜಿಸುತ್ತಿದ್ದ ತೆಲುಗು ಭಾಷೆಯ ಬೋರ್ಡುಗಳು ಮತ್ತು ಬರೇ ತೆಲುಗು ಮಾತನಾಡಿಕೊಂಡು ಓಡಾಡುತ್ತಿದ್ದ ಜನ. ವಾಸ್ತವವಾಗಿ ಚೆನ್ನೈ ಆಂಧ್ರಪ್ರದೇಶಕ್ಕೆ ಸೇರಬೇಕಿತ್ತಂತೆ. ರಾಜ್ಯ ವಿಂಗಡಣೆಯ ಸಂಧರ್ಭದಲ್ಲಿ ತಮಿಳುನಾಡಿಗೆ ಚೆನ್ನೈ ಬೇಕೋ ಅಥವ ತಿರುಪತಿ ಬೇಕೋ ಎಂದು option ಕೊಟ್ಟಾಗ ಜನ ಚೆನ್ನೈಯೇ ಬೇಕು ಅಂದರಂತೆ. so ತಿರುಪತಿ ಆಂಧ್ರಕ್ಕೆ ಹೋಯಿತು. ಹಾಗಾಗಿ ಇವತ್ತಿಗೂ ಆಂಧ್ರ ಗಡಿಯಲ್ಲಿ ಇರುವ ಚೆನ್ನೈನಲ್ಲಿ ತೆಲುಗರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಮತ್ತು ತಮಿಳುನಾಡಿನ ಗಡಿಯಲ್ಲಿರುವ ತಿರುಪತಿಯಲ್ಲಿ ತಮಿಳರು ಅಧಿಕ ಸಂಖ್ಯೆಯಲ್ಲಿದ್ದಾರೆ. (ಈ ಕಥೆಯನ್ನು ನನಗೆ ನನ್ನ ಆಂಧ್ರ ಸ್ನೇಹಿತನೊಬ್ಬ ಹೇಳಿದ್ದು. ಇದರ validity ಬಗ್ಗೆ ನಾನು ಯಾವುದೇ ಗ್ಯಾರಂಟಿ ಕೊಡಲಾರೆ.)
ಸೂರ್ಯ ಆಗಿನ್ನೂ ತನ್ನ ಅಂದಕಾಲತ್ತಿಲ್ ಪ್ರೇಯಸಿ ಭೂಮಿಯನ್ನ ನೋಡಲೋ ಬೇಡವೋ ನೋಡಲೋ ಬೇಡವೋ ಎಂದು ನಾಚುತ್ತಲೇ ಕಿರುಗಣ್ಣಿನಲ್ಲೇ ಕಣ್ಣು ಹೊಡೆಯುತ್ತಿದ್ದರೂ ಚೆನ್ನೈನಲ್ಲಿ ಅಸಾಧ್ಯ ಸೆಖೆ ಇತ್ತು. ಬೆಳಗಿನ ಆ ಹೊತ್ತಿನಲ್ಲೇ ನಾನು ಬೆವರುತ್ತಿದ್ದೆ. ಹತ್ತಿರದಲ್ಲೇ ಇದ್ದ ಲಾಡ್ಜೊಂದರಲ್ಲಿ ನೆಪಮಾತ್ರಕ್ಕೆ ರೂಮ್ ಮಾಡಿ ಸ್ನಾನ ಇತ್ಯಾದಿಗಳನ್ನು ಮುಗಿಸಿದೆ. ನನ್ನ ವೀಸಾ ಸಂದರ್ಶನಕ್ಕೆ ಅಪಾಯಿಂಟ್ಮೆಂಟ್ ಇದ್ದದ್ದು ಬೆಳಿಗ್ಗೆ ಒಂಬತ್ತೂವರೆಗೆ. ಹಾಗಾಗಿ ನಾನು ಹೆಚ್ಚು ಸಮಯ ವೇಸ್ಟ್ ಮಾಡುವಂತಿರಲಿಲ್ಲ. ತಮಾಷೆಯಿರುವುದು ಇಲ್ಲಿಯೇ. ನನ್ನ ಬಳಿ ವಾಚ್ ಇರಲಿಲ್ಲ. ನನ್ನ ಸೆಲ್‌ಫೋನ್ ಕೂಡ ಬೆಂಗಳೂರಿನಲ್ಲೆ ಬಿಟ್ಟು ಬಂದಿದ್ದೆ. ಹಾಗಾಗಿ ನಿಖರವಾದ ಸಮಯ ನನಗೆ ಗೊತ್ತಿರಲಿಲ್ಲ ಮತ್ತು ನಾನು ಯಾರಲ್ಲೂ ಕೇಳಲೂ ಇಲ್ಲ. ಹೊರಗೆ ಸಾಕಷ್ಟು ಬಿಸಿಲಿತ್ತಾದ್ದರಿಂದ ಸಮಯ ಸುಮಾರು ಎಂಟು ಗಂಟೆಯಾಗಿರಬಹುದೆಂದು ಅಂದಾಜು ಮಾಡಿ, ಕನಿಷ್ಟಪಕ್ಷ ನಿಗದಿತ ಸಮಯದ ಹದಿನೈದು ನಿಮಿಷ ಮುಂಚಿತವಾಗಿಯಾದರೂ ಅಲ್ಲಿ ಸೇರಬೇಕೆಂದುಕೊಂಡು ಗಡಿಬಿಡಿಯಲ್ಲಿ ಹೊರಟೆ. ಬಣ್ಣಗೆಟ್ಟ ಬಸ್ಸುಗಳನ್ನು ನೋಡಿ ನಿರಾಸೆಯಾಯ್ತೆಂದು ಆಗಲೆ ಹೇಳಿದೆನಲ್ಲ. ಹಾಗಾಗಿ ಎಷ್ಟು ದುಡ್ಡಾದರೂ ಪರವಾಗಿಲ್ಲ, ಆಟೋದಲ್ಲೇ ಹೋಗುವುದೆಂದು ನಿಶ್ಚಯ ಮಾಡಿದೆ. ಲಾಡ್ಜಿನ ಹೊರಗೆ ರಸ್ತೆಗೆ ಬಂದೊಡನೆ ಆಟೋಗಳ ಸಮುದ್ರವೆ ಕಣ್ಣಿಗೆ ಬಿತ್ತಾದ್ದರಿಂದ ಆ ಸಮುದ್ರದಲ್ಲಿ ಒಂದು ಆಟೋ ಹೆಕ್ಕಿ ತೆಗೆಯುವುದೇನೂ ಕಷ್ಟವಾಗಲಿಲ್ಲ. ನಾನು ಹೋಗಬೇಕಾದ "Anna square" ಜಾಗದ ಹೆಸರು ಹೇಳುತ್ತಿದ್ದಂತೆ ಆಟೋ ಚಾಲಕ ತನ್ನ ಬಲಗೈಯ ನಾಲ್ಕು ಬೆರಳುಗಳನ್ನು ತೋರಿಸಿ ಯಾವುದೋ ಸಂಖ್ಯೆಯನ್ನು ಹೇಳಿದ. ಚೆನ್ನೈ ಆಟೋದವರ ಸ್ಟಾಂಡರ್ಡ್ ಫೇರ್ ಆದ 'ನಲವತ್ತ'ರ ಬಗ್ಗೆ ಈತ ಹೇಳುತ್ತಿದ್ದಾನೆ ಎಂಬುದು ಗೊತ್ತಾಗಿದ್ದರಿಂದ ಕಮಕ್ ಕಿಮಕ್ ಎನ್ನದೆ ಆಟೋ ಹತ್ತಿದೆ. ನಿಜ ಹೇಳಬೇಕೆಂದರೆ ಆತ ನಾಲ್ಕರ ಬದಲು ಕೈಕಾಲುಗಳನ್ನು ಒಟ್ಟು ಸೇರಿಸಿ ಇಪ್ಪತ್ತು ಬೆರಳು ತೋರಿಸಿದ್ದರೂ ನಾನು ಆತನ ಆಟೋ ಹತ್ತುತ್ತಿದ್ದೆ.
ಸರಿ, ಮುಂದುವರಿಯಿತು ಆಟೋ ಯಾವುದೇ ferrari ಕಾರಿಗೂ ಕಡಿಮೆಯಿರದ ವೇಗದಲ್ಲಿ. ಬೆಂಗಳೂರಿನಲ್ಲಿ ಮೈಮೇಲೇ ನುಗ್ಗುವ ಆಟೋಗಳಿಂದ ನಾನು ತರಬೇತಿ ಪಡೆದವನಾದ್ದರಿಂದ, ವೇಗವಾಗಿ ಆಟೋ ಓಡಿಸಿ ಈ ಪರರಾಜ್ಯದವನಿಗೆ ಚೆನ್ನೈ ಮೇಲೆ ಭಯ ಹುಟ್ಟಿಸಬೇಕೆಂಬ ಆಟೋ ಚಾಲಕನ ಕುತಂತ್ರವನ್ನು ನಾನು ವಿಫಲಗೊಳಿಸಿದ್ದಂತೂ ನಿಜ. ಹೊರಟ ಹತ್ತು ನಿಮಿಷಕ್ಕೆ anna square ಬಂತು. ಹತ್ತು ನಿಮಿಷದ ಪ್ರಯಾಣಕ್ಕೆ ನಲವತ್ತು ರೂಪಾಯಿ ಕಕ್ಕಿ ನಾನು ಅಮೆರಿಕ ವೀಸಾ ಕಾನ್ಸಲೇಟ್‌ನ ಕಡೆಗೆ ಹೆಜ್ಜೆ ಹಾಕಿದೆ. ಬಹಳ ಬಿಸಿಲಿದ್ದಿದ್ದರಿಂದಲೂ, ತೀವ್ರ ಸೆಖೆ ಇದ್ದಿದ್ದರಿಂದಲೂ ಸಮಯ ಸುಮಾರು ಒಂಬತ್ತು ಆಗಿರಬಹುದೆನ್ನುವುದೇ ನನ್ನ ಭಾವನೆ. ಕಾನ್ಸುಲೇಟ್ನ ಗೇಟ್ ಪ್ರವೇಶಿಸುತ್ತಿದವನನ್ನು ಸೆಕ್ಯುರಿಟಿ ಗಾರ್ಡ್ ತಡೆದು ನಯವಾಗಿ ಏನಾಗಬೇಕೆಂದು ವಿಚಾರಿಸಿದ. ನಾನು ನನ್ನ ಹತ್ತಿರವಿದ್ದ ಅಪಾಯಿಂಟ್‌ಮೆಂಟ್ ಲೆಟರ್ ಅವನತ್ತ ಚಾಚಿ, ಹೀಗೆ ಹೀಗೆ ಸಂದರ್ಶನಕ್ಕೆ ಬಂದಿದ್ದೇನೆ ಎಂದು ಹೇಳಿದೆ. ಸೆಕ್ಯುರಿಟಿ ಗಾರ್ಡ್ ಆಶ್ಚರ್ಯಗೊಂಡವನಂತೆ ತನ್ನ ಗಡಿಯಾರ ನೋಡಿ "ಈಗಿನ್ನೂ ಸಮಯ ಆರೂವರೆ. ಒಂಬತ್ತೂಕಾಲರ ಒಳಗೆ ನೀವು ಒಳಹೋಗುವುದಕ್ಕೆ ಆಗುವುದಿಲ್ಲ" ಅನ್ನುವುದೇ? ನನಗೆ ಒಮ್ಮೆಲೇ ಶಾಕ್ ಆದ ಹಾಗೆ ಆಯಿತು. ಆತನ ಗಡಿಯಾರ ನೋಡಿದೆ. ಗಂಟೆಯ ಮುಳ್ಳು 'ನಾನು ಇಲ್ಲಿಂದ ಅಲ್ಲಾಡಲಾರೆ' ಎಂಬಂತೆ ಭದ್ರವಾಗಿ ಆರು ಮತ್ತು ಏಳರ ಮದ್ಯೆ ಪ್ರತಿಷ್ಟಾಪನೆಯಾಗಿತ್ತು. ಮಧ್ಯಾನ ಊಟದ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗುವ ಸರ್ಕಾರಿ ಗುಮಾಸ್ತನ ರೀತಿ ನಿಮಿಷದ ಮುಳ್ಳು ಮೆಲ್ಲಗೆ ಆರನ್ನು ಬಿಟ್ಟು ಜಾಗ ಖಾಲಿ ಮಾಡುತ್ತಿತ್ತು. ಸೆಕೆಂಡಿನ ಮುಳ್ಳು ಮಾತ್ರ ಗುರಿ ಮುಟ್ಟುವ ತನಕ ನಿಲ್ಲಬಾರದೆಂದು ಮಿಲ್ಖಾ ಸಿಂಗ್‌ನ ರೀತಿ ಒಂದೇ ಸಮನೆ ಓಡುತ್ತಲೇ ಇತ್ತು. ಹೊರಬಂದು ಮತ್ತಿಬ್ಬರಲ್ಲಿ ಸಮಯ ಕೇಳಿ ಖಚಿತಪಡಿಸಿಕೊಂಡೆ. ಅಂದರೆ ಬೆಳಿಗ್ಗೆ ಆರೂವರೆಗೆ ಪ್ರಖರ ಬಿಸಿಲು ಮತ್ತು ಈ ಪಾಟಿ ಸೆಖೆ! ಸಾಗರ, ಚಿಕ್ಕಮಗಳೂರಿನಂತ ತಣ್ಣನೆಯ ಹವೆಯ ಊರುಗಳಲ್ಲೇ ಹುಟ್ಟಿ ಬೆಳೆದಿದ್ದ್ದ ನನಗೆ ಈ ರೀತಿಯ ವಾತಾವರನ ತೀರಾ ಹೊಸದು. ಆದ್ದರಿಂದಲೇ ಸಮಯದ ಬಗ್ಗೆ ನಾನು ಇಷ್ಟು ಯಡವಟ್ಟಾಗಿ ತಪ್ಪು ಊಹೆ ಮಾಡಿದ್ದು. ಇನ್ನು ಮೂರು ಗಂಟೆಗಳ ಕಾಲ ನಾನು ಹೊರಗೆ ಕಾಯಲೇಬೇಕಾಗಿತ್ತು. ತಿಂಡಿಯಾದರೂ ತಿನ್ನೋಣವೆಂದರೆ ಸಮೀಪದಲ್ಲೇ ಸ್ವಲ್ಪ ಚೆನ್ನಾಗಿ ಕಂಡ ಒಂದು ಹೋಟೆಲ್ ಕೂಡ ಏಳೂವರೆಗೆ ಬಾಗಿಲು ತೆಗೆಯುವುದಂತೆ. ಪತ್ರಿಕೆಯನ್ನಾದರೂ ಓದೋಣವೆಂದು ಅಲ್ಲೇ ಇದ್ದ ಪುಸ್ತಕದ ಅಂಗಡಿಗೆ ಹೋಗಿ "The Times of India" ಕೇಳಿದೆ. "ಚೆನ್ನೈನಲಿ ಇವತ್ತಿನ times ನಾಳೆಯೇ ಬರುವುದು. ಬೇಕಿದ್ದರೆ The Hindu ಓದಿ" ಎಂದು The Hindu ನನ್ನ ಕೈಗಿತ್ತ ಆ ಪುಣ್ಯಾತ್ಮ. ನನಗೆ ಸಮಯ ಕಳೆಯಲು ಓದಲು ಏನಾದರೂ ಇದ್ದರೆ ಸಾಕಿತ್ತು.
ಪೇಪರ್ ಹಿಡಿದುಕೊಂಡು ಅಂಗಡಿಯ ಮುಂದಿನ ಕಟ್ಟೆಯಲ್ಲಿ ಕುಳಿತರೆ ಎಲ್ಲರೂ ನನ್ನನ್ನ ವಿಚಿತ್ರವಾಗಿ ನೋಡುವವರೆ. ಆದರೆ ನನಗೆ ಹೋಗಲು ಬೇರೆ ಯಾವುದೆ ಜಾಗವಿಲ್ಲವಾದ್ದರಿಂದ ಈ ನೋಟಗಳಿಗೆ ಅಂಜಬಾರದೆಂದು ತೀರ್ಮಾನಿಸಿ ಎದ್ದು ಹೋಗದೆ ಅಲ್ಲಿಯೇ ಕುಳಿತಿದ್ದೆ ಏಳೂವರೆ ಆಗುವುದನ್ನೇ ಕಾಯುತ್ತಾ. ಹೋಟೆಲ್ ಬಾಗಿಲು ತೆರೆದೊಡನೆ ಬೋಣಿ ನಾನೇ. ಆಗಿನ್ನೂ ತಯರಾಗಿದ್ದ ಇಡ್ಲಿ, ವಡೆ ಮುಗಿಸಿ ಮತ್ತೆ ನನ್ನ ಸ್ವಸ್ಥಾನವಾದ ಅಂಗಡಿ ಕಟ್ಟೆಗೆ ವಾಪಸಾದೆ. ಕಾಯುವುದರ ಜೊತೆಗೆ ಸೆಖೆಯ ಕಾಟ ಬೇರೆ. ಸ್ವಲ್ಪ ಹೊತ್ತಿಗೆ ಮತ್ತೆ ಬೇಜಾರಾಗಿ ಅದೇ ಹೋಟೆಲಿಗೆ ಹೋಗಿ ಎರಡನೇ ಇನ್ನಿಂಗ್ಸ್ನಲ್ಲಿ ಮಸಾಲೆ ದೋಸೆ ಮುಗಿಸಿದೆ. ಅಂತೂ ಇಂತೂ ಹೇಗೋ ಮಾಡಿ, ಅಲ್ಲಿ ಇಲ್ಲಿ ಅಲೆದು, ನೆನಪಾದವರಿಗೆಲ್ಲಾ ಫೋನ್ ಮಾಡುತ್ತಾ ಮೂರು ಗಂಟೆಗಳ ಬಿಸಿಲಲ್ಲಿ ಕಾಯುವ ಶಿಕ್ಷೆಯನ್ನು ಮುಗಿಸಿದೆ.
ವೀಸಾ ಸಂದರ್ಶನ ಬಹು ಸುಲಭವಾಗಿ ಮುಗಿಯಿತು. ಕೇಳಿದ ೨-೩ ಪ್ರಶ್ನೆಗಳಲ್ಲೇ ಸರಿಯಾಗಿ ಸಮಯವನ್ನೂ ತಿಳಿಯಲು ಬಾರದ ನನ್ನಂತವರಿಗೆ ಭಾರತದಲ್ಲಿ ಇರಲು ಯೋಗ್ಯತೆಯೇ ಇಲ್ಲ ಅನ್ನುವುದನ್ನು ಅರ್ಥಮಾಡಿಕೊಂಡ ವೀಸಾ ಆಫೀಸರ್, "ಪಾಸ್ಪೋರ್ಟ್ ನನ್ನಲ್ಲಿಯೇ ಇರಲಿ, ಎರಡು ದಿನದ ನಂತರ ವೀಸಾ ಸ್ಟಾಂಪ್ನ ಜೊತೆಗೆ ಕಳಿಸಿಕೊಡುತ್ತೇನೆ" ಅಂದ. ನನ್ನ ಪಾಸ್ಪೋರ್ಟ್ ಮೇಲಿದ್ದ 'ಸಾಗರ' ಅನ್ನುವ ಊರು ಭೂಮಿಯ ಮೇಲೆ ಎಲ್ಲಿದೆ ಎನ್ನುವುದೇ ಆತನ ಬಹುದೊಡ್ಡ doubt ಆಗಿತ್ತು.
ಹೊರಬಂದು ಕಣ್ಣಿಗೆ ಬಿದ್ದ ಮೊದಲ ಆಟೋವನ್ನು ಕರೆದು ಆತ ತೋರಿಸಿದ ನಾಲ್ಕು ಬೆರಳಿಗೆ ಒಪ್ಪಿ ರೈಲ್ವೇ ಸ್ಟೇಷನ್ ಕಡೆ ಹೊರಟೆ. ಆದಷ್ತು ಬೇಗ ನನಗೆ ಬೆಂಗಳೂರು ಸೇರಬೇಕಿತ್ತು. ಆದರೆ ಆಟೋ ಡ್ರೈವರ್ ನನ್ನ ಪಾಡಿಗೆ ನನ್ನನ್ನು ಬಿಡಲೊಲ್ಲ. ನನಗೆ ತಮಿಳು ಬರುವುದಿಲ್ಲ ಎಂದು ಗೊತ್ತಾದ ಮೇಲೂ ಆತನ 'ತಮಿಳ್‌ಮಾಲೈ' ಪುಂಖಾನುಪುಂಖವಾಗಿ ಹರಿದೇ ಇತ್ತು. ಅದೇನು ಹೇಳುತ್ತಿದ್ದನೋ ನನಗೆ ನಯಾಪೈಸೆಯೂ ಅರ್ಥವಾಗುತ್ತಿರಲಿಲ್ಲ. ಆತನಿಗೋ ತಮಿಳು ಬಿಟ್ಟು ಬೇರೆಯ ಭಾಷೆ ಬಾರದು. ಕೊನೆಗೂ ಈ ಸಮಸ್ಯೆಗೆ ನಾನು ಪರಿಹಾರ ಕಂಡುಕೊಂಡೆ. ಆತ ತಮಿಳಿನಲ್ಲಿ ಮಾತನಾಡುತ್ತಿದ್ದ, ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೆ! ಆಶ್ಚರ್ಯವಾಗುವಂತೆ ಇಬ್ಬರಿಗೂ ಇಬ್ಬರ ಮಾತೂ ಅರ್ಥವಾಗತೊಡಗಿತು. ಹೀಗೆ ಸ್ವಲ್ಪ ಹೊತ್ತಿನ ಮಟ್ಟಿಗಾದರೂ ಚೆನ್ನೈನ ತ್ರಿಚಕ್ರ ವಾಹನವೊಂದರಲ್ಲಿ ಕೂತು ನಾನು ಮತ್ತು ಚಾಲಕ, ಭಾಷೆ ದೇಶಗಳ ಎಲ್ಲಾ ಮಿತಿಗಳನ್ನು ಮೀರಿ 'ವಿಶ್ವಮಾನವ'ರಾಗಿದ್ದೆವು.
ನಾನು ಉಳಿದಿದ್ದ ಹೋಟೆಲು ತಲುಪಿ ಬೆವರಿನಿಂದ ಸ್ನಾನ ಮಾಡಿದ್ದ ದೇಹಕ್ಕೆ ನೀರಿನಿಂದ ಸ್ನಾನ ಮಾಡಿಸಿ ಒಂದು ಒಳ್ಳೆಯ ಊಟ ಮಾಡಿ ಸ್ಟೇಷನ್ ತಲುಪಿದಾಗ ಬೆಂಗಳೂರಿಗೆ ಮುಂದಿನ ರೈಲು ಹೊರಡಲು ಕೇವಲ ಅರ್ಧ ಗಂಟೆ ಬಾಕಿ ಇತ್ತು. ಆದರೆ ಬಿಸಿ ಕಾವಲಿಯಾಗಿದ್ದ ರೈಲಿನ ಒಳಗೆ ಅರ್ಧ ಗಂಟೆ ಕೂತಿರುವುದೂ ಅಸಾಧ್ಯವಾಗಿತ್ತು. ಹೇಗೋ ಮಾಡಿ ಕಿಟಕಿ ಪಕ್ಕ ಒಂದು ಸೀಟು ಸಂಪಾದಿಸಿದೆ. ಬೆಂಗಳೂರು ತಲುಪುವವರೆಗೂ ನನಗೆ ಸಮಾಧಾನವೇ ಇಲ್ಲ. ಬೆಂಗಳೂರಿಗೆ ಬಂದು ಇಳಿದ ಮೇಲೆ ಇನ್ನೂ ಸಣ್ಣಗೆ ಮಳೆ ಹನಿಯುತ್ತಲೇ ಇದ್ದ ತಣ್ಣಗೆ ಹವೆಗೆ ಮೈಕೊಟ್ಟೂ ಸ್ಟ್ಟೇಷನ್ ಹತ್ತಿರವೇ ಗಾಡಿಯಲ್ಲಿ ಪಾನಿ ಪುರಿ ತಿನ್ನುವಾಗ ಬೆಂಗಳೂರಿನಂತ ಸ್ವರ್ಗ ಇನ್ನೊಂದಿಲ್ಲ ಎನ್ನಿಸಿತು.

2 Comments:

  • ಶ್ರೀಹರ್ಷ,

    ಚೆನ್ನಾಗಿದೆ ನಿಮ್ಮ ಚೆನೈ ಅನುಭವಗಳು !

    ಬಹುಷ ಬೆಂಗಳೂರಿನಿಂದ ಚೆನೈಗೇ ಹೋಗುವ ನಮ್ಮಂತಹವರಲ್ಲಿ ಹೆಚ್ಚಿನವರು ವೀಸಾ ಒತ್ತಿಸಿಕೊಳ್ಳೊಕೆ ಹೋಗುದು ಅನಿಸುತ್ತೆ.

    ನೀವು ಹೇಳಿದ್ದು ನಿಜ..ಚೆನೈ ಆಟೋದವರಿಗೆ ಆಟೋದಲ್ಲಿದವರಿಗೆ ತಮಿಳು ಬರೋಲ್ಲ ಅಂತಾ ತಿಳಿದರೆ ಸಾಕು,ಶುರು ಹಚ್ಚಿಬಿಟ್ಟತ್ತಾರೆ :)

    ಹೀಗೆ ಸಾಗಲಿ..ನಿಮ್ಮ ಬ್ಲಾಗುವಿಕೆ !

    By Blogger Shiv, at 11:25 PM  

  • ಈ ಮೊದಲು ಇದನ್ನು ಕೆಏ ನಲ್ಲಿ ಓದಿದ ನೆನಪು. ಅಲ್ಲಿ ಮೊದಲು ಹಾಕಿದ್ರಾ? ನಿಮ್ಮ ಬರಹದ ಶೈಲಿ ಬಹಳ ಚೆನ್ನಾಗಿದೆ. ಚೆನ್ನೈ ಬಗ್ಗೆ ಉಪಮೆಗಳನ್ನು ಉಪಯೋಗಿಸಿರುವುದಂತೂ ಸರಿಯಾಗಿದೆ (apt ಆಗಿದೆ). ಈಗ ಮುಂದಿನ ಲೇಖನಕ್ಕೆ ಗೋಯಿಂಗು.

    By Blogger bhadra, at 11:59 PM  

Post a Comment

<< Home